ಸುಪ್ರೀಂಕೋರ್ಟ್ ಆವರಣದಲ್ಲಿ ಸ್ವಯಂದಹನಕ್ಕೆ ಯತ್ನಿಸಿದ್ದ ಯುವಕ ಮೃತ್ಯು

ಹೊಸದಿಲ್ಲಿ, ಆ.21: ಇಲ್ಲಿನ ಸುಪ್ರೀಂಕೋರ್ಟ್ ಕಟ್ಟಡದ ಹೊರಭಾಗದಲ್ಲಿ ಸ್ವಯಂದಹನಕ್ಕೆ ಯತ್ನಿಸಿ, ಗಂಭೀರ ಸುಟ್ಟಗಾಯಗಳಾಗಿದ್ದ 27 ವರ್ಷದ ಯುವಕನೊಬ್ಬ ಶನಿವಾರ ಕೊನೆಯುಸಿರೆಳೆದಿದ್ದಾನೆ.
ಸೋಮವಾರ ಯುವಕ ಹಾಗೂ 24 ವರ್ಷದ ಯುವತಿ ಸುಪ್ರೀಂಕೋರ್ಟ್ ಆವರಣದಲ್ಲಿ ತಮ್ಮನ್ನು ತಾವೇ ಸುಟ್ಟುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಘಟನೆಯಲ್ಲಿ ಯುವಕನಿಗೆ ಶೇ.65ರಷ್ಟು ಹಾಗೂ ಯುವತಿಗೆ ಶೇ.85ಷ್ಟು ಸುಟ್ಟಗಾಯಗಳಾಗಿದ್ದವು. ಇವರಿಬ್ಬರನ್ನೂ ರಾಮಮನೋಹರ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಯುವತಿಯ ಸ್ಥಿತಿ ಚಿಂತಾಜನಕವಾಗಿದ್ದು, ಆಕೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಆತ್ಮಹತ್ಯೆಗೆ ಯತ್ನಿಸುವ ಮುನ್ನ ಯುವತಿ ಹಾಗೂ ಆತನ ಜೊತೆಗಾರ ಫೇಸ್ ಬುಕ್ ನಲ್ಲಿ ವಿಡಿಯೋ ಒಂದನ್ನು ಪ್ರಸಾರ ಮಾಡಿದ್ದಾರೆ. ಯುವತಿಯು ಉತ್ತರಪ್ರದೇಶದ ಗಾಝಿಪುರದವಳಾಗಿದ್ದು, ಆಕೆಯನ್ನು ಬಿಎಸ್ಪಿ ಪಕ್ಷದ ಸಂಸದ ಅತುಲ್ ರಾಯ್ 2019ರಲ್ಲಿ ಅತ್ಯಾಚಾರ ಮಾಡಿದ್ದನೆಂದು ವಿಡಿಯೋದಲ್ಲಿ ಅವರು ಆರೋಪಿಸಿದ್ದಾರೆ.
ಆರೋಪಿಯ ಸಹೋದರನು ತನ್ನ ವಿರುದ್ಧ ವಂಚನೆಯ ದೂರು ದಾಖಲಿಸಿದ್ದು, ಈ ಗ್ಗೆ ಉತ್ತರಪ್ರದೇಶದ ವಾರಣಾಸಿ ಜಿಲ್ಲೆಯ ನ್ಯಾಯಾಲಯವೊಂದು ತನಗೆ ಜಾಮೀನುರಹಿತ ವಾರಂಟ್ ಜಾರಿಗೊಳಿಸಿರುವುದಾಗಿಯೂ ಆಕೆ ಹೇಳಿದ್ದಾರೆ.
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಸಂಸದ ಅತುಲ್ ರಾಯ್ ಕಳೆದ ಎರಡು ವರ್ಷಗಳಿಂದ ನ್ಯಾಯಾಂಗ ಬಂಧನದಲ್ಲಿದ್ದಾನೆ. ಆರೋಪಿಗೆ ಕೆಲವು ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಇತರರ ಬೆಂಬಲವಿರುವುದಾಗಿ ಆಕೆ ಆರೋಪಿಸಿದ್ದಾರೆ.
ಕಳೆದ ಮಾರ್ಚ್ ನಲ್ಲಿ ಮಹಿಳೆಯು ಸುಪ್ರೀಂ ಕೋರ್ಟ್ ಗೆ ಮನವಿಯೊಂದನ್ನು ಸಲ್ಲಿಸಿ, ತನ್ನ ಜೀವಕ್ಕೆ ಬೆದರಿಕೆಯಿರುವ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಅಲಹಾಬಾದ್ ನ್ಯಾಯಾಲಯದಿಂದ ದಿಲ್ಲಿ ಹೈಕೋರ್ಟ್ ಗೆ ವರ್ಗಾಯಿಸಬೇಕೆಂದು ಕೋರಿದ್ದರು.
ಯುವ ಜೋಡಿಯ ಆತ್ಮಹತ್ಯೆ ಯತ್ನಕ್ಕೆ ನಿಖರ ಕಾರಣವನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿರುವುದಾಗಿ ಹೊಸದಿಲ್ಲಿಯ ಉಪಪೊಲೀಸ್ ಆಯುಕ್ತ ದೀಪಕ್ ಯಾದವ್ ತಿಳಿಸಿದ್ದಾರೆ.
ಆದರೆ ತನ್ನ ವಿರುದ್ಧ ಆರೋಪಿಯ ಕಡೆಯವರು ವಂಚನೆಯ ಪ್ರಕರಣದಲ್ಲಿ ಸಿಲುಕಿಸುವ ಸಾಧ್ಯತೆಯಿದೆಯೆಂಬ ಭೀತಿಯಿಂದ ಆಕೆ ಆತ್ಮಹತ್ಯೆಗೆ ಯತ್ನಿಸಿರಬಹುದೆಂದು ಶಂಕಿಸಲಾಗುತ್ತಿದೆ ಎಂದವರು ಹೇಳಿದ್ದಾರೆ.







