ವಿಚಾರಣಾ ಆಯೋಗದ ಮುಂದೆ ಹಾಜರಾಗದ ಪರಮಬೀರ್ ಸಿಂಗ್ ಗೆ 25,000 ರೂ.ದಂಡ
ಮುಂಬೈ,ಆ.21: ನ್ಯಾ.(ನಿವೃತ್ತ) ಕೆ.ಯು.ಚಾಂದಿವಾಲ್ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗವು ಆ.18ರಂದು ತನ್ನ ಮುಂದೆ ಹಾಜರಾಗದ್ದಕ್ಕಾಗಿ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮಬೀರ್ ಸಿಂಗ್ ಅವರಿಗೆ 25,000 ರೂ.ಗಳ ದಂಡವನ್ನು ವಿಧಿಸಿದೆ.
ಸಿಂಗ್ ಅವರು ಆಗಿನ ಮಹಾರಾಷ್ಟ್ರ ಗೃಹಸಚಿವ ಅನಿಲ್ ದೇಶಮುಖ್ ಅವರ ವಿರುದ್ಧ ಮಾಡಿದ್ದ ಭ್ರಷ್ಟಾಚಾರದ ಆರೋಪಗಳ ಕುರಿತು ತನಿಖೆಗಾಗಿ ರಾಜ್ಯ ಸರಕಾರವು ಈ ವರ್ಷದ ಮಾರ್ಚ್ನಲ್ಲಿ ನ್ಯಾ.ಚಾಂದಿವಾಲ್ ನೇತೃತ್ವದ ಆಯೋಗವನ್ನು ರಚಿಸಿತ್ತು.
ಹಿಂದಿನ ವಿಚಾರಣೆಯ ಸಂದರ್ಭದಲ್ಲಿ ಆಯೋಗವು ತನ್ನ ಮುಂದೆ ಹಾಜರಾಗಲು ಸಿಂಗ್ ಅವರಿಗೆ ಆ.18ರ ಕೊನೆಯ ಅವಕಾಶವನ್ನು ನೀಡಿತ್ತು.
ಆಯೋಗವು ಸಿಂಗ್ ಅವರಿಗೆ ದಂಡವನ್ನು ವಿಧಿಸಿರುವುದು ಇದು ಎರಡನೇ ಸಲವಾಗಿದೆ. ಕಳೆದ ಜೂನ್ನಲ್ಲಿ ಸಮನ್ಸ್ ಹೊರಡಿಸಿದ್ದರೂ ತನ್ನ ಮುಂದೆ ಹಾಜರಾಗದಿದ್ದಕ್ಕಾಗಿ ಆಯೋಗವು ಅವರಿಗೆ 5,000 ರೂ.ಗಳ ದಂಡವನ್ನು ವಿಧಿಸಿತ್ತು.
Next Story





