ಜಾತಿಗಣತಿ ಆಗ್ರಹಿಸಿ ಪ್ರಧಾನಿ ಬಳಿಗೆ ಸರ್ವಪಕ್ಷ ನಿಯೋಗ: ನಿತೀಶ್

ಪಾಟ್ನಾ,ಆ.12: ಜಾತಿ ಆಧಾರಿತ ಜನಗಣತಿ ನಡೆಸಬೇಕೆಂದು ಆಗ್ರಹಿಸಿ ತನ್ನ ನೇತೃತ್ವದಲ್ಲಿ ರಾಜ್ಯದಿಂದ ಸರ್ವ ಪಕ್ಷನಿಯೋಗವೊಂದನ್ನು ಪ್ರಧಾನ ನರೇಂದ್ರ ಮೋದಿಯವರ ಬಳಿಗೆ ಕೊಂಡೊಯ್ಯುವುದಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಶನಿವಾರ ತಿಳಿಸಿದ್ದಾರೆ.
ಪ್ರತಿಪಕ್ಷ ನಾಯಕ ಆರ್ಜೆಡಿಯ ತೇಜಸ್ವಿ ಯಾದವ್, ಬಿಜೆಪಿ ಶಾಸಕ ಮತ್ತು ಗಣಿ ಹಾಗೂ ಭೂಶಾಸ್ತ್ರ ಸಚಿವ ಜನಕ್ ರಾಮ್ ಅವರು ಕೂಡಾ ನಿಯೋಗದಲ್ಲಿರುವರು ಎಂದು ನಿತೀಶ್ ತಿಶಿಸಿದ್ದಾರೆ.
‘‘ಪ್ರಧಾನಿಯವರು ಸೋಮವಾರ ಭೇಟಿಗೆ ಅವಕಾಶ ನೀಡಿದ್ದಾರೆ. ನಿಯೋಗದ ಎಲ್ಲಾ ಸದಸ್ಯರ ಸಮಗ್ರ ಪಟ್ಟಿಯನ್ನು ಪ್ರಧಾನಿಯವರಿಗೆ ಕಳುಹಿಸಲಾಗಿದೆ’’ ಎಂದು ಕುಮಾರ್ ಪಾಟ್ನಾದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸದ್ಯಕ್ಕೆ ನಾವು, ಜಾತಿ ಆಧಾರಿತ ಜನಗಣತಿ ನಡೆಯಬೇಕೆಂದ ಮನವಿ ಸಲ್ಲಿಸಲು ಪ್ರಧಾನಿಯವರ ಬಳಿಗೆ ತೆರಳುತ್ತಿದ್ದೇವೆ. ಆ ಬಗ್ಗೆ ನಿರ್ಧಾರ ಕೈಗೊಳ್ಳುವುದು ಕೇಂದ್ರ ಸರಕಾರಕ್ಕೆ ಸೇರಿದ್ದಾಗಿದೆಯೆಂದು ಬಿಹಾರ ಮುಖ್ಯಮಂತ್ರಿ ತಿಳಿಸಿದರು.
ಒಂದು ವೇಳೆ ದೇಶವ್ಯಾಪಿಯಾಗಿ ಈ ಪ್ರಕ್ರಿಯೆ ನಡೆದಲ್ಲಿ ಅದು ಅತ್ಯಂತ ಪ್ರಯೋಜನಕಾರಿಯಾಗಲಿದೆ ಎಂದು ನಿತೀಶ್ ತಿಳಿಸಿದರು.
ಜಾತಿ ಗಣತಿಗಾಗಿ ಎಲ್ಲ ಕಡೆಯಿಂದಲೂ ಬೇಡಿಕೆಯಿರುವುದಾಗಿ ನಿತೀಶ್ ತಿಳಿಸಿದರು. ಬಿಹಾರದಲ್ಲಿ ಜಾತಿಗಣತಿಯನ್ನು ನಡೆಸುವಂತೆ ಕೋರಿ ಪ್ರಧಾನಿ ಬಳಿಗೆ ನಿಯೋಗವನ್ನು ಕೊಂಡೊಯ್ಯುವ ಚಿಂತನೆಯನ್ನು ಮಹಾಘಟಬಂಧನ ಮೈತ್ರಿಕೂಟವು ಪ್ರಸ್ತಾವಿಸಿತ್ತು ಹಾಗೂ ಇದಕ್ಕಾಗಿ ಪ್ರಧಾನಿ ಭೇಟಿಗೆ ಕಾಲಾವಕಾಶವನ್ನು ಕೋರುವಂತೆಯೂ ಮುಖ್ಯಮಂತ್ರಿಯವರನ್ನು ಆಗ್ರಹಿಸಿತ್ತು.
ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಎನ್ಡಿಎ ಮೈತ್ರಿಕೂಟದಲ್ಲಿ ಬಜೆಪಿ ಪಾಲುದಾರನಾಗಿದೆ. ನಿಯೋಗದಲ್ಲಿ ಸಚಿವ ಜನಕ್ ರಾಮ್ ಅವರನ್ನು ತನ್ನ ಪ್ರತಿನಿಧಿಯಾಗಿ ಹೆಸರಿಸಿದೆ ಮತ್ತು ಬಿಜೆಪಿ ನಾಯಕಿ ಮತ್ತು ಉಪಮುಖ್ಯಮಂತ್ರಿ ರೇಣುದೇವಿ ನಿಯೋಗದಲ್ಲಿರುವುದಿಲ್ಲ ಎಂದು ತಿಳಿದು ಬಂದಿದೆ.







