ತಾಲಿಬಾನ್ ಆಡಳಿತದ ಅಫ್ಘಾನ್‌ನಲ್ಲಿ ಹಸಿವು, ಅನಾರೋಗ್ಯ ವ್ಯಾಪಕ : ಡಬ್ಲ್ಯುಎಚ್‌ಒ

ಜಿನೀವಾ: ಅಫ್ಘಾನಿಸ್ತಾನದ ಆಡಳಿತ ಸೂತ್ರ ತಾಲಿಬಾನ್ ಪಾಲಾದ ಬಳಿಕ ದೇಶಾದ್ಯಂತ ಮಾನವೀಯ ಸಂಕಷ್ಟಗಳು ವ್ಯಾಪಕವಾಗಿದ್ದು, ಆರೋಗ್ಯ ವ್ಯವಸ್ಥೆ ಹದಗೆಟ್ಟಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಅಭಿಪ್ರಾಯಪಟ್ಟಿದೆ.
ಶನಿವಾರ ಈ ಸಂಬಂಧ ಹೇಳಿಕೆ ನೀಡಿರುವ ಡಬ್ಲ್ಯುಎಚ್‌ಒ, ಅಫ್ಘಾನಿಸ್ತಾನದ ಆರೋಗ್ಯ ಸೇವಾ ಸ್ಥಿತಿ ಆತಂಕಕಾರಿ ಎಂದು ಬಣ್ಣಿಸಿದೆ. ಸಂಘರ್ಷದಿಂದಾಗಿ ಅಸಂಖ್ಯಾತ ಜನ ಹಸಿವು ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಹೇಳಿದೆ.
ಸಾರ್ವಜನಿಕ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ, 40 ಲಕ್ಷ ಮಹಿಳೆಯರು ಮತ್ತು ಒಂದು ಕೋಟಿ ಮಕ್ಕಳು ಸೇರಿದಂತೆ ಅಫ್ಘಾನಿಸ್ತಾನದ ಒಟ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟು ಮಂದಿಗೆ ಮಾನವೀಯ ನೆರವಿನ ಅಗತ್ಯವಿದೆ.
ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಡಬ್ಲ್ಯುಎಚ್‌ಒ ವಕ್ತಾರ ತಾರಿಕ್ ಜಸರೇವಿಕ್ ಈ ಸಂಬಂಧ ಹೇಳಿಕೆ ನೀಡಿ, "ಈಗಾಗಲೇ ಸಂಕಷ್ಟದಲ್ಲಿರುವ ಅಫ್ಘಾನಿಸ್ತಾನದ ಬರ ಪರಿಸ್ಥಿತಿಯಿಂದಾಗಿ ಒಟ್ಟಾರೆ ಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ" ಎಂದು ಅಭಿಪ್ರಾಯಪಟ್ಟಿದ್ದಾರೆ. "ದೇಶಾದ್ಯಂತ ಅದರಲ್ಲೂ ಮುಖ್ಯವಾಗಿ ಮಹಿಳೆಯರಿಗೆ ಮತ್ತು ಮಹಿಳಾ ಆರೋಗ್ಯ ಕಾರ್ಯಕರ್ತರಿಗೆ ಆರೋಗ್ಯ ಸೇವೆ ನಿರಂತರವಾಗಿ ಮುಂದುವರಿಯಬೇಕು" ಎಂದು ಹೇಳಿದ್ದಾರೆ.
"ಇದೀಗ ಬಹುತೇಕ ಆರೋಗ್ಯ ಸೌಲಭ್ಯಗಳು ಕಾರ್ಯಾರಂಭ ಮಾಡಿವೆ. ಪ್ರಾಂತೀಯ ಮಟ್ಟದಲ್ಲಿ ನಿಗಾ ವಹಿಸಿದ ಬಳಿಕ ಆರೋಗ್ಯ ಕಾರ್ಯಕರ್ತರನ್ನು ಕರ್ತವ್ಯಕ್ಕೆ ಕರೆಸಿಕೊಂಡು ತಮ್ಮ ಸ್ಥಳಗಳಲ್ಲಿ ಕಾರ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ" ಎಂದು ವಿವರಿಸಿದ್ದಾರೆ.
ಏತನ್ಮಧ್ಯೆ ಅಫ್ಘಾನ್ ಸಂಘರ್ಷದ ಬಳಿಕ ಬರುತ್ತಿರುವ ಅಫ್ಘಾನ್ ನಿರಾಶ್ರಿತರಿಗೆ ಕೊರೋನ ವೈರಸ್ ವಿರುದ್ಧದ ಲಸಿಕೆಯನ್ನು ನೀಡಲು ಕ್ರಮ ಕೈಗೊಳ್ಳುವುದಾಗಿ ಬ್ರಿಟನ್ ಪ್ರಕಟಿಸಿದೆ. ಇಂಗ್ಲೆಂಡ್, ಸ್ಕಾಟ್ಲೆಂಡ್ ಮತ್ತು ವೇಲ್ಸ್ ಕೂಡಾ ನಿರಾಶ್ರಿತರಿಗೆ ಆಹಾರ, ಮನೆ ಮತ್ತು ಇತರ ಸೌಲಭ್ಯಗಳನ್ನು ಒದಗಿಸಲು ತುರ್ತು ನಿಧಿ ಪಡೆದಿವೆ. ಅಫ್ಘಾನ್‌ನಲ್ಲಿ ನಿರಾಶ್ರಿತರಾದ ಸುಮಾರು 20 ಸಾವಿರ ಮಂದಿಗೆ ಆಶ್ರಯ ನೀಡಲು ಬ್ರಿಟನ್ ನಿರ್ಧರಿಸಿದೆ.