ರಾಜೀನಾಮೆ ಹಿಂತೆಗೆದುಕೊಂಡ ತ್ರಿಪುರಾ ಕಾಂಗ್ರೆಸ್ ಘಟಕದ ಮುಖ್ಯಸ್ಥ ಪಿಜುಶ್ ಕಾಂತಿ ಬಿಸ್ವಾಸ್

photo: twitter
ಹೊಸದಿಲ್ಲಿ: ಕಾಂಗ್ರೆಸ್ ತೊರೆದು ಶನಿವಾರ ರಾಜಕೀಯದಿಂದ ನಿವೃತ್ತಿ ಘೋಷಿಸಿದ ಕೆಲ ಗಂಟೆಗಳ ನಂತರ ಪಕ್ಷದ ತ್ರಿಪುರಾ ಘಟಕದ ಹಂಗಾಮಿ ಅಧ್ಯಕ್ಷ ಪಿಜುಶ್ ಕಾಂತಿ ಬಿಸ್ವಾಸ್ ರಾಜೀನಾಮೆಯನ್ನು ಹಿಂತೆಗೆದುಕೊಂಡರು. ತನ್ನ ಸಮಸ್ಯೆಗಳನ್ನು ಪರಿಶೀಲಿಸಲಾಗುವುದು ಎಂಬ ಭರವಸೆ ಸಿಕ್ಕಿರುವುದಾಗಿ ಬಿಸ್ವಾಸ್ ಹೇಳಿದರು.
ವೈಯಕ್ತಿಕ ಕಾರಣಗಳು ತಮ್ಮ ರಾಜೀನಾಮೆಯನ್ನು ಸಲ್ಲಿಸಲು ಪ್ರೇರೇಪಿಸಿತು ಎಂದು ಮೊದಲಿಗೆ ಹೇಳಿದ್ದ ಬಿಸ್ವಾಸ್, ನಂತರ ಯು-ಟರ್ನ್ ಮಾಡಿದರು . ನಿರ್ವಹಿಸಬೇಕಾದ ವಿಷಯಗಳು ಇರುವುದರಿಂದ ತಾನು ರಾಜೀನಾಮೆ ನೀಡಲು ಮುಂದಾಗಿದ್ದೆ ಎಂದು ಹೇಳಿದರು.
“ಕಾಂಗ್ರೆಸ್ನ ತ್ರಿಪುರಾ ಉಸ್ತುವಾರಿ ಅಜೋಯ್ ಕುಮಾರ್ ನನ್ನೊಂದಿಗೆ ಮಾತನಾಡಿದ್ದಾರೆ ಹಾಗೂ ನಾನು ತ್ರಿಪುರಾದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಅವರು ನನ್ನನ್ನು ಭೇಟಿ ಮಾಡುವ ಭರವಸೆ ನೀಡಿದರು. ಅವರು ಸಮಸ್ಯೆಗಳನ್ನು ಪರಿಹರಿಸಿದರೆ, ಟಿಪಿಸಿಸಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಲು ನನಗೆ ಯಾವುದೇ ಸಮಸ್ಯೆ ಇಲ್ಲ, ”ಎಂದು ಬಿಸ್ವಾಸ್ ಹೇಳಿದರು.
ಬಿಸ್ವಾಸ್ ಪ್ರಸ್ತಾಪಿಸಿದ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಪರಿಹರಿಸಲಾಗುವುದು ಎಂದು ಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ಇಂದು ನಾನು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಹಾಗೂ ರಾಜಕೀಯದಿಂದಲೂ ನಿವೃತ್ತಿಯಾಗಿದ್ದೇನೆ. ಗೌರವಾನ್ವಿತ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧೀಜಿಗೆ ನನ್ನ ಪ್ರಾಮಾಣಿಕ ಕೃತಜ್ಞತೆಗಳು" ಎಂದು ಬಿಸ್ವಾಸ್, ಟ್ವಿಟರ್ನಲ್ಲಿ ಶನಿವಾರ ಹೇಳಿದ್ದರು.







