ಅಸ್ಸಾಂ:ಮೂವರು ಬ್ಯಾಂಕ್ ದರೋಡೆಕೋರರನ್ನು ಗುಂಡಿಕ್ಕಿ ಕೊಂದ ಪೊಲೀಸರು

ಗುವಾಹಟಿ: ದರೋಡೆ ಯತ್ನಕ್ಕೆ ಮುಂದಾಗಿದ್ದ ಮೂವರು ಶಂಕಿತ ಬ್ಯಾಂಕ್ ದರೋಡೆಕೋರರನ್ನು ಅಸ್ಸಾಂನ ಕೊಕ್ರಜಾರ್ ಜಿಲ್ಲೆಯಲ್ಲಿ ರವಿವಾರ ಪೊಲೀಸರು ಗುಂಡಿಕ್ಕಿ ಸಾಯಿಸಿದ್ದಾರೆ.
ಕೊಕ್ರಜಾರ್ ಪಟ್ಟಣದಿಂದ ಆರು ಕಿ.ಮೀ. ದೂರದಲ್ಲಿರುವ ಭೋಟ್ಗಾಂವ್ ಹಳ್ಳಿಯ ಅಲಹಾಬಾದ್ ಬ್ಯಾಂಕ್ ಶಾಖೆಯ ದರೋಡೆಗೈಯಲು ಮೂವರು ಕಳ್ಳರು ಯೋಜಿಸಿದ್ದರು. ಅದೇ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ತಂಡವು ದರೋಡೆಕೋರರನ್ನು ತಡೆದಿದೆ.
ಆಗಸ್ಟ್ 22 ರ ಬೆಳಗಿನ ಜಾವ 2.30 ಕ್ಕೆ ಭೋಟ್ಗಾಂವ್ ಬಳಿಯ ಚೆಂಗ್‌ಮಾರಿಯಲ್ಲಿ ಕಳ್ಳರ ಜೊತೆ ಗುಂಡಿನ ಚಕಮಕಿ ನಡೆದಿದೆ ಹಾಗೂ ಅವರು ಗುಂಡು ಹಾರಿಸಿದ ನಂತರವೇ ನಾವು ಗುಂಡು ಹಾರಿಸಿದ್ದೆವು ಎಂದು ಪೊಲೀಸ್ ಇಲಾಖೆಯು ಹೇಳಿಕೆಯಲ್ಲಿ ತಿಳಿಸಿದೆ.
ಗುಂಡಿನ ದಾಳಿ ನಿಲ್ಲಿಸಿದ ನಂತರ ಪೊಲೀಸರು ಕೂಂಬಿಂಗ್ ಕಾರ್ಯಾಚರಣೆಯನ್ನು ಆರಂಭಿಸಿದರು ಮತ್ತು ಮೂವರು ದರೋಡೆಕೋರರು ತೀವ್ರವಾಗಿ ಗಾಯಗೊಂಡಿರುವುದನ್ನು ಪತ್ತೆ ಹಚ್ಚಿದರು. ಉಳಿದ ಇಬ್ಬರು-ಮೂವರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಗಾಯಗೊಂಡ ಮೂವರು ಬಳಿಕ ಮೃತಪಟ್ಟರು. ದರೋಡೆಕೋರರಿಂದ ವಾಹನಗಳು, ಉಪಕರಣಗಳು, ಗ್ಯಾಸ್ ಕಟ್ಟರ್‌ಗಳು, ಪಿಸ್ತೂಲ್‌ಗಳು ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಸ್ಸಾಂ ಡಿಜಿಪಿ ಭಾಸ್ಕರ್ ಜ್ಯೋತಿ ಮಹಾಂತ ಹೇಳಿದರು.





