ಮಂಗಳೂರು: ಹೊಸ ‘ಬಸ್-ಬೇ’ ನಿರ್ಮಾಣಕ್ಕೆ ಆದ್ಯತೆ

ಮಂಗಳೂರು, ಆ.22: ನಗರದಲ್ಲಿ ಈಗಾಗಲೇ ಇರುವ ‘ಬಸ್-ಬೇ’ಗಳ ಜೊತೆ ಮತ್ತಷ್ಟು ಹೊಸ ‘ಬಸ್-ಬೇ’ಗಳನ್ನು ನಿರ್ಮಿಸಲು ಮಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ.
ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಪ್ರಮುಖ ರಸ್ತೆಗಳಲ್ಲಿ ಹೆಚ್ಚುತ್ತಿರುವ ವಾಹನ ಸಂದಣಿಯನ್ನು ತಡೆಗಟ್ಟಲು ಮತ್ತು ಸುಗಮವಾಗಿ ವಾಹನಗಳನ್ನು ಸಂಚರಿಸಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಬಸ್ ಬೇ’ ನಿರ್ಮಿಸಲು ಉದ್ದೇಶಿಸಲಾಗಿದೆ.
ಪ್ರಸ್ತುತ ನಗರದ ಪ್ರಮುಖ ರಸ್ತೆಗಳು ವಾಹನ ದಟ್ಟಣೆಯಿಂದ ಕೂಡಿದೆ. ವಾಹನಗಳ ಸುಗಮ ಸಂಚಾರಕ್ಕಾಗಿ ಬಸ್ ಬೇ ನಿರ್ಮಿಸುವುದು ಅಗತ್ಯ ಎಂದು ಮನಗಂಡ ಪಾಲಿಕೆಯು ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ 1.09 ಕೋ.ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಮುಂದಾಗಿದೆ.
ಈಗಾಗಲೇ ನಗರದ ಲಾಲ್‌ಭಾಗ್, ಅಂಬೇಡ್ಕರ್ ವೃತ್ತ, ನಂತೂರು, ಸರ್ಕ್ಯೂಟ್ ಹೌಸ್, ಕೂಳೂರು ಮತ್ತಿತರ ಕೆಲವು ಕಡೆಗಳಲ್ಲಿ ‘ಬಸ್-ಬೇ’ಗಳಿವೆ. ಇದೀಗ ಹೊಸದಾಗಿ ಬಂಟ್ಸ್ ಹಾಸ್ಟೆಲ್, ಮಲ್ಲಿಕಟ್ಟೆ, ಮೇರಿಹಿಲ್, ಕುಲಶೇಖರ ಮತ್ತಿತರ ಕಡೆಗಳಲ್ಲಿ ‘ಬಸ್ ಬೇ’ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.
ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ ಕೈಗೊಳ್ಳುವ ಕಾಮಗಾರಿಗಳ ಕ್ರೀಯಾ ಯೋಜನೆಗೆ 2019ರಲ್ಲಿ ಸರಕಾರದಿಂದ 125 ಕೋ.ರೂ. ಮೊತ್ತ ಹಂಚಿಕೆಯಾಗಿತ್ತು. 2019-20ರಿಂದ 2023-24ನೇ ಸಾಲಿನ ವರೆಗೆ 5 ವರ್ಷದ ಅವಧಿಯಲ್ಲಿ 99.93 ಕೋ.ರೂ. ಮೊತ್ತದ ಕ್ರೀಯಾಯೋಜನೆಗೆ ಅನುಮೋದನೆ ನೀಡಲಾಗಿದೆ. ಅದರಲ್ಲಿ 1.09 ಕೋ ರೂ.ವನ್ನು ‘ಬಸ್-ಬೇ’ಗಳನ್ನು ನಿರ್ಮಿಸಲು ಮೀಸಲಿರಿಸಲಾಗಿದೆ.
ಏನಿದು ಬಸ್-ಬೇ ?
‘ಬಸ್-ಬೇ’ ಅಂದರೆ ಬಸ್ ತಂಗುದಾಣದಲ್ಲಿ ಬಸ್ ನಿಲ್ಲಿಸುವ ಸಲುವಾಗಿ ಪ್ರತ್ಯೇಕವಾಗಿ ನಿಗದಿಪಡಿಸಿದ ಜಾಗ. ಇಲ್ಲಿ ರಸ್ತೆಯನ್ನು ಅರ್ಧ ವೃತ್ತಾಕಾರದಲ್ಲಿ ವಿಸ್ತರಿಸಲಾಗುತ್ತದೆ. ಒಂದು ಕಡೆಯಲ್ಲಿ ಒಳ ಹೋದರೆ, ಇನ್ನೊಂದು ಕಡೆಯಲ್ಲಿ ಹೊರಗೆ ಬರಲು ವ್ಯವಸ್ಥೆ ಕಲ್ಪಿಸಲಾಗುತ್ತದೆ. ‘ಬೇ’ಯಲ್ಲಿ ಬಸ್ ನಿಲ್ಲಿಸಿದರೆ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರಗಳಿಗೆ ಯಾವುದೇ ಅಡ್ಡಿಯಾಗುವುದಿಲ್ಲ. ‘ಬಸ್-ಬೇ’ ಯ ಜಾಗಕ್ಕೆ ಕಾಂಕ್ರೀಟು ಹಾಕುವುದರೊಂದಿಗೆ, ಟ್ರಾಫಿಕ್ ಕೋನ್‌ಗಳನ್ನು ಕೂಡ ಅಳವಡಿಸಲಾಗುತ್ತದೆ. ಅಲ್ಲದೆ ಸುಸಜ್ಜಿತ ಬಸ್ ಪ್ರಯಾಣಿಕರ ತಂಗುದಾಣ ನಿರ್ಮಿಸಲಾಗುತ್ತದೆ.
''ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಹಲವು ಕಡೆ ಸುಗಮ ಸಂಚಾರಕ್ಕಾಗಿ ‘ಬಸ್-ಬೇ’ ನಿರ್ಮಿಸಲು ಉದ್ದೇಶಿಸಲಾಗಿದೆ. ಕಾಮಗಾರಿಯ ಅಂದಾಜು ವೆಚ್ಚ 1.09 ಕೋ.ರೂ. ಆಗಿದ್ದು, ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ ಕಾಮಗಾರಿ ನಡೆಯಲಿದೆ''.
-ಪ್ರೇಮಾನಂದ ಶೆಟ್ಟಿ, ಮೇಯರ್, ಮಂಗಳೂರು







