ಪ್ರಾಥಮಿಕ ಶಾಲೆಗಳು ಶೀಘ್ರವೇ ಪ್ರಾರಂಭವಾಗಲಿ: ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ

ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ
ಬೆಂಗಳೂರು, ಆ.22: ಕೋವಿಡ್ ಮಾರ್ಗಸೂಚಿಯನ್ವಯ ನಾಳೆಯಿಂದ(ಆ.23)9ರಿಂದ 12ನೇ ತರಗತಿ ಪ್ರಾರಂಭವಾಗಿತ್ತಿದೆ. ಅದೇ ಮಾದರಿಯಲ್ಲಿಯೇ ಪ್ರಾಥಮಿಕ ಶಾಲೆಗಳನ್ನು ಶೀಘ್ರದಲ್ಲಿಯೇ ಪ್ರಾರಂಭಿಸಬೇಕೆಂದು ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮುಖ್ಯಮಂತ್ರಿ ಹಾಗು ಶಿಕ್ಷಣ ಸಚಿವರ ಒತ್ತಾಸೆಯಿಂದ ರಾಜ್ಯದಲ್ಲಿ 9 ರಿಂದ 12 ನೇ ತರಗತಿಗಳು ನಾಳೆಯಿಂದ ಪ್ರಾರಂಭವಾಗುತ್ತಿವೆ. ಇದು ಅತ್ಯಂತ ಸ್ವಾಗತಾರ್ಹ ನಿರ್ಧಾರ. ಸರಕಾರದ ಈ ಪ್ರಯತ್ನಕ್ಕೆ ರಾಜ್ಯ ಶಾಲಾಭಿವೃದ್ಧಿ ಹಾಗು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದ್ದಾರೆ.
ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗಿಂತಲೂ ಪ್ರಾಥಮಿಕ ಹಂತದ ಮಕ್ಕಳು ಶಾಲೆಯಿಲ್ಲದೆ ಹಲವು ಸಮಸ್ಯೆಗೆ ಸಿಲುಕಿದ್ದಾರೆ. ಈ ಹಂತದ ಹೆಚ್ಚು ಮಕ್ಕಳು ಶಾಲೆ ತೊರೆದು ಬಾಲ ಕಾರ್ಮಿಕರಾಗಿರುವುದಲ್ಲದೆ, ಮಕ್ಕಳು ಬಾಲ್ಯವಿವಾಹ ಮತ್ತು ಭಿಕ್ಷಾಟನೆಗೆ ತೊಡಗಿರುವುದು ಹಲವು ಅಧ್ಯಯನಗಳಿಂದ ತಿಳಿದುಬಂದಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಕೋವಿಡ್ ಲಾಕ್ಡೌನ್ ನಂತರದಲ್ಲಿ ಪ್ರಾಥಮಿಕ ಶಾಲಾ ಮಕ್ಕಳಲ್ಲಿ ಅಪೌಷ್ಟಿಕತೆಯ ಪ್ರಮಾಣ ಹೆಚ್ಚಳವಾಗಿದೆ. ಹೀಗಾಗಿ ಈ ಮಕ್ಕಳಿಗೆ ಕೂಡಲೇ ಶಾಲೆ ತೆರೆದು ಬೆಳಗಿನ ಬಿಸಿಹಾಲು ಹಾಗೂ ಮಧ್ಯಾಹ್ನದ ಬಿಸಿ ಊಟದೊಂದಿಗೆ ಕಲಿಕೆಯನ್ನು ಪ್ರಾರಂಭಿಸಬೇಕೆಂದು ಅವರು ಮನವಿ ಮಾಡಿದ್ದಾರೆ.







