ನಗ್ನ ವೀಡಿಯೊ ವೈರಲ್ ಬೆದರಿಕೆ: ಬಿಜೆಪಿ ನಾಯಕನಿಂದ 31 ಸಾವಿರ ರೂ. ಸುಲಿಗೆ; ದೂರು ದಾಖಲು

ಬೆಂಗಳೂರು, ಆ.22: ನಗ್ನ ವೀಡಿಯೊ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿರುವುದಾಗಿ ಬಿಜೆಪಿ ನಾಯಕನೋರ್ವನನ್ನು ಬೆದರಿಸಿರುವ ದುಷ್ಕರ್ಮಿಗಳು, ಆತನಿಂದ 31 ಸಾವಿರ ರೂ. ಸುಲಿಗೆ ಮಾಡಿರುವ ಆರೋಪ ಕೇಳಿಬಂದಿದೆ.
ಬಿಜೆಪಿ ರಾಷ್ಟ್ರೀಯ ಎಸ್ಸಿ ಮೋರ್ಚಾ ಕಾರ್ಯದರ್ಶಿ ಚಿ.ನಾ.ರಾಮು ಎಂಬುವರನ್ನು ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಮಾಡಿಕೊಂಡ ಮಹಿಳೆಯೊಬ್ಬಾಕೆ, ನಂತರ ವಾಟ್ಸಪ್ ಸಂಖ್ಯೆ ಪಡೆದಿದ್ದಾಳೆ. ಬಳಿಕ ಅಸಭ್ಯವಾಗಿ ವರ್ತಿಸಿ ವೀಡಿಯೊ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ.
ಕೆಲ ದಿನದ ಬಳಿಕ ಚಿ.ನಾ.ರಾಮು ಅನ್ನು ಸಂಪರ್ಕಿಸಿ, ತಾವು ನಗ್ನವಾಗಿರುವ ವೀಡಿಯೊ ತಮ್ಮ ಬಳಿಯಿದ್ದು, ಹಣ ನೀಡಬೇಕು.ಇಲ್ಲದಿದ್ದರೆ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆವೊಡ್ಡಿದ್ದಾರೆ.ಇದಾದ ನಂತರ ಚಿ.ನಾ.ರಾಮು ಹಂತ ಹಂತವಾಗಿ ದುಷ್ಕರ್ಮಿಗಳಿಗೆ 31 ಸಾವಿರ ರೂ.ಜಮೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಬೆದರಿಕೆ ಆರೋಪ ಸಂಬಂಧ ಇಲ್ಲಿನ ಕೇಂದ್ರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.





