ಉಡುಪಿ : ಕೋವಿಡ್ ಗೆ ಇಬ್ಬರ ಬಲಿ; 132 ಮಂದಿಗೆ ಕೊರೋನ ಪಾಸಿಟಿವ್

ಉಡುಪಿ, ಆ. 22: ಜಿಲ್ಲೆಯಲ್ಲಿ ರವಿವಾರ ಇಬ್ಬರು ಕೊರೋನಕ್ಕೆ ಬಲಿಯಾಗಿದ್ದಾರೆ. ಅಲ್ಲದೇ 132 ಮಂದಿ ಹೊಸದಾಗಿ ಸೋಂಕಿಗೆ ಪಾಸಿಟಿವ್ ಬಂದಿದ್ದಾರೆ. ಒಟ್ಟು 86 ಮಂದಿ ಸೋಂಕಿನಿಂದ ಚೇತರಿಸಿಕೊಂಡರೆ. ಸೋಂಕಿಗೆ ಸಕ್ರಿಯರಾಗಿರುವವರ ಸಂಖ್ಯೆ 1543ಕ್ಕೇರಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.
ರವಿವಾರ ಜಿಲ್ಲೆಯಲ್ಲಿ ಇಬ್ಬರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 440ಕ್ಕೇರಿದೆ. ಉಡುಪಿ ತಾಲೂಕಿನ 75ರ ಹರೆಯದ ಮಹಿಳೆ 16ರಂದು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿ ಶುಕ್ರವಾರ ಮೃತಪಟ್ಟರೆ, ಕುಂದಾಪುರದ 56 ವರ್ಷದ ಪ್ರಾಯದ ಪುರುಷ ತೀವ್ರ ಜ್ವರಕ್ಕಾಗಿ ಆ.21ರ ಶನಿವಾರ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಅದೇ ದಿನ ಕೊನೆಯು ಸಿರೆಳೆದರು. ಇಬ್ಬರೂ ಕೋವಿಡ್ ರೋಗ ಚಿಹ್ನೆಯೊಂದಿಗೆ ತೀವ್ರ ಉಸಿರಾಟದ ತೊಂದರೆಯನ್ನು ಅನುಭವಿಸಿದ್ದರು.
ಇಂದು ಕೊರೋನ ಸೋಂಕು ದೃಢಪಟ್ಟ 132 ಮಂದಿಯಲ್ಲಿ 73 ಮಂದಿ ಪುರುಷರು ಹಾಗೂ 59 ಮಂದಿ ಮಹಿಳೆಯರು. ಪಾಸಿಟಿವ್ ಬಂದವರಲ್ಲಿ 83 ಮಂದಿ ಉಡುಪಿ ತಾಲೂಕು, 11 ಮಂದಿ ಕುಂದಾಪುರ ಹಾಗೂ 38ಮಂದಿ ಕಾರ್ಕಳ ತಾಲೂಕಿನವರು. ಪಾಸಿಟಿವ್ ಬಂದವರಲ್ಲಿ 20 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಹಾಗೂ 112 ಮಂದಿ ಮನೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
ಶನಿವಾರ 86 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಕೊರೋನ ದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 70,807ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ 6603 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಈವರೆಗೆ ಜಿಲ್ಲೆಯಲ್ಲಿ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 72,790ಕ್ಕೇರಿದೆ ಎಂದು ಡಾ.ಉಡುಪ ತಿಳಿಸಿದರು. ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 8,92,656 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ.
ಜಿಲ್ಲೆಯಲ್ಲಿ ಇಂದು ಸಹ ಹೊಸದಾಗಿ ಯಾರೂ ಭ್ಲ್ಯಾಕ್ ಫಂಗಸ್ ಸೋಂಕಿನ ಚಿಕಿತ್ಸೆಗೆ ದಾಖಲಾಗಿಲ್ಲ. ಸದ್ಯ ಹೊರಜಿಲ್ಲೆಗಳ ಮೂವರು ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿಗೆ ಚಿಕಿತ್ಸೆ ಪಡೆಯುತಿದ್ದಾರೆ.
5,899 ಮಂದಿಗೆ ಲಸಿಕೆ: ಉಡುಪಿ ಜಿಲ್ಲೆಯಲ್ಲಿ ರವಿವಾರ 5,899 ಮಂದಿಗೆ ಕೋವಿಡ್ ಲಸಿಕೆಯನ್ನು ನೀಡಲಾಗಿದೆ. ಇದರಲ್ಲಿ 4609 ಮಂದಿಗೆ ಮೊದಲ ಡೋಸ್ ಹಾಗೂ 1290 ಮಂದಿಗೆ ಎರಡನೇ ಡೋಸ್‌ನ್ನು ನೀಡಲಾಗಿದೆ ಎಂದು ಡಿಎಚ್‌ಒ ಡಾ. ನಾಗಭೂಷಣ ಉಡುಪ ತಿಳಿಸಿದ್ದಾರೆ.
18ರಿಂದ 44ವರ್ಷದೊಳಗಿನ 3389 ಮಂದಿ ಮೊದಲ ಹಾಗೂ 518 ಮಂದಿ ಎರಡನೇ ಡೋಸ್ ಪಡೆದಿದ್ದರೆ, 45 ವರ್ಷ ಮೇಲಿನ 1220 ಮಂದಿಗೆ ಮೊದಲ ಹಾಗೂ 772 ಮಂದಿಗೆ ಎರಡನೇ ಡೋಸ್ ಲಸಿಕೆಯನ್ನು ನೀಡಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟಾರೆಯಾಗಿ ಜಿಲ್ಲೆಯ 6,08,590 ಮಂದಿಗೆ ಮೊದಲ ಡೋಸ್ ಹಾಗೂ 2,26,328 ಮಂದಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.







