ಅಭಿವ್ಯಕಿ ಸ್ವಾತಂತ್ರ್ಯಕ್ಕೆ ಧಕ್ಕೆ: ತೀಸ್ತಾ ಸೆಟಲ್ವಾಡ್

ಬೆಂಗಳೂರು, ಆ.22: ಇತ್ತೀಚಿನ ದಿನಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮೇಲಿಂದ ಮೇಲೆ ಧಕ್ಕೆಯಾಗುತ್ತಿರುವುದು ದುರ್ದೈವದ ಸಂಗತಿ ಎಂದು ಹಿರಿಯ ಪತ್ರಕರ್ತೆ ಹಾಗೂ ಸಿಟಿಜನ್ ಫಾರ್ ಜಸ್ಟಿಸ್ ಅಂಡ್ ಪೀಸ್ ಸಂಸ್ಥೆ ಕಾರ್ಯದರ್ಶಿ ತೀಸ್ತಾ ಸೆಟಲ್ವಾಡ್ ನುಡಿದರು.
ರವಿವಾರ ಗೌರಿ ಮೆಮೋರಿಯಲ್ ಟ್ರಸ್ಟ್ ಹಾಗೂ ಸಿಟಿಜನ್ಸ್ ಫಾರ್ ಜಸ್ಟೀಸ್ ಮತ್ತು ಪೀಸ್ ಸಹಯೋಗದೊಂದಿಗೆ ದಾಳಿಗೊಳಗಾದ ಪ್ರಜಾಪ್ರಭುತ್ವ ಕುರಿತ ವಿಡಿಯೊ ಸಂವಾದವನ್ನುದ್ದೇಶಿಸಿ ಅವರು ಮಾತನಾಡಿದರು.
ಸದ್ಯದ ಪರಿಸ್ಥಿತಿಯಲ್ಲಿ ನಾವು ಏನನ್ನು ಬರೆಯ ಬೇಕು? ಏನನ್ನು ಮಾತನಾಡಬೇಕು ಎಂಬುದನ್ನು ಇನ್ಯಾರೋ ನಿರ್ಧರಿಸು ವಂತಹ ವಾತಾವರಣ ನಿರ್ಮಾಣಗೊಂಡಿದೆ.ಇದರಿಂದ ನಮ್ಮ ಅಭಿವ್ಯಕ್ತಿಯ ಸ್ವಾತಂತ್ರ್ಯವೇ ಅಪಾಯಕ್ಕೆ ಸಿಲುಕಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾಶ್ಮೀರ ಸೇರಿದಂತೆ ಇನ್ನಿತರೆ ಗಂಭೀರ ವಿಷಯಗಳ ಬಗ್ಗೆ ನಾವು ಬಹಿರಂಗವಾಗಿ ಚರ್ಚೆಯೇ ಮಾಡುವಂತಿಲ್ಲ ಎನ್ನುವ ಭೀತಿ ಹುಟ್ಟುಹಾಕಲಾಗಿದೆ.ಆಡಳಿತ ನಡೆಸುವ ಸರಕಾರಗಳ ವಿರುದ್ಧ ಹೇಳಿಕೆಗಳನ್ನು ನೀಡಿದರೆ, ದೇಶದ್ರೋಹದಂತಹ ಪ್ರಕರಣಗಳನ್ನೆ ದಾಖಲಿಸಿ, ಹಿಂಸಿಸುವ ಪ್ರವೃತ್ತಿಯೂ ನಡೆದಿರುವ ಉದಾಹರಣೆಗಳಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೇಶದಲ್ಲಿ ಇಂದು ವಿಭಜನೆಯ ರಾಜಕಾರಣವೇ ಹೆಚ್ಚಾಗುತ್ತಿದೆ ಎಂದ ಅವರು, ಸಂವಿಧಾನ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ಕಳೆದುಕೊಳ್ಳುವ ಅಪಾಯದಲ್ಲಿರುವಾಗ ಪತ್ರಕರ್ತರ, ಲೇಖಕರ, ರಂಗಕರ್ಮಿಗಳ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ. ರಾಜಕೀಯ, ಸಾಮಾಜಿಕ, ಕೃಷಿ, ಶಿಕ್ಷಣ ವಿಷಯಗಳ ಬಗ್ಗೆ ಹೆಚ್ಚೆಚ್ಚು ಪ್ರಶ್ನೆಗಳನ್ನು ಎತ್ತಬೇಕು ಎಂದು ಅವರು ಕರೆ ನೀಡಿದರು.
ಸಂವಾದದಲ್ಲಿ ಸಹ ಸಂಸ್ಥಾಪಕ ಸಿದ್ದಾರ್ಥ್ ವರದರಾಜನ್, ನ್ಯೂಸ್‍ಕ್ಲಿಕ್‍ನ ಸಂಪಾದಕ ಪ್ರಬೀರ್ ಪುರ್ಕಯಾಸ್ತ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.







