ಜನತೆಗೆ ಜಲಮೂಲಗಳ ಬಗ್ಗೆ ಹೆಚ್ಚಿನ ಅರಿವು ಅಗತ್ಯವಿದೆ: ವೆಂಕಯ್ಯನಾಯ್ಡು

ಬೆಂಗಳೂರು, ಆ.22: `ನದಿಗಳು ಮತ್ತು ಜಲ ಮೂಲಗಳ ಪರಿಸರ ಮಹತ್ವದ ಬಗ್ಗೆ ಜನರಿಗೆ ಶಿಕ್ಷಣ ನೀಡಬೇಕಾಗಿದೆ. ನಗರವಾಸಿಗಳು ಒಳಗೊಂಡಂತೆ ಪ್ರತಿಯೊಬ್ಬರು ಇದನ್ನು ಮಾಲಿನ್ಯ ಅಥವಾ ಅಧೋಗತಿಗಿಳಿಸದಂತೆ ನೋಡಿಕೊಳ್ಳಬೇಕೆಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.
ರವಿವಾರ ವಿಜಯನಗರದ ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯವನ್ನು ವೀಕ್ಷಿಸಿದ ಅವರು, ತುಂಗಭದ್ರಾ ಜಲಾಶಯದ ನೀರಿನ ವಿಸ್ತಾರ ನೋಡುವುದು ಒಂದು ಸೊಗಸಾದ ಅನುಭವವಾಗಿತ್ತು. ಅಣೆಕಟ್ಟೆಯ ಗೇಟುಗಳತ್ತ ಒಂದರ ನಂತರ ಒಂದರಂತೆ ಬಿಳಿ ಹಾಲಿನ ತೆರೆಗಳು ಸಾಗುತ್ತಿದ್ದುದ್ದನ್ನು ನೋಡುತ್ತಿದ್ದಂತೆ ಸಮಯ ನಿಂತಂತೆ ಭಾಸವಾಯಿತ್ತೆಂದು ಬಣ್ಣಿಸಿದ್ದಾರೆ.
ಈ ನೀರಿನ ಹರಿವು ನೋಡಿದಾಗ ಈ ಸೀಮಿತ ಸಂಪನ್ಮೂಲ ನಿರ್ವಹಿಸಿದ ಪಾತ್ರ ಮತ್ತು ಭವಿಷ್ಯದ ಪೀಳಿಗೆಗೆ ಇದನ್ನು ಉಳಿಸುವ ಮತ್ತು ಸಂರಕ್ಷಿಸುವ ತುರ್ತು ಅಗತ್ಯವಿದೆ. ನೀರು ಮತ್ತು ಭೂಮಿ ಸೀಮಿತ ಸಂಪನ್ಮೂಲ ಹಾಗೂ ಇದನ್ನು ನ್ಯಾಯಯುತವಾಗಿ ಬಳಸಬೇಕು. ಒಂದು ನದಿಯು ಒಂದು ಜೀವಂತ ವಸ್ತುವಿದ್ದಂತೆ ಮತ್ತು ಅದರ ಶುದ್ಧತೆ ಹಾಗೂ ಪಾವಿತ್ರ್ಯವನ್ನು ಹಾಗೆಯೇ ಉಳಿಸಿಕೊಳ್ಳಲು ನಾವು ಸಂಕಲ್ಪ ಮಾಡೋಣವೆಂದು ಅವರು ತಿಳಿಸಿದ್ದಾರೆ.
ತುಂಗಭದ್ರಾ ಈ ವಲಯದ ವಿವಿಧೋದ್ದೇಶದ ಯೋಜನೆಯಾಗಿದ್ದು, ಅಭಿವೃದ್ದಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದೆ, ಹೆಚ್ಚಿನ ರೈತರಿಗೆ ನೀರಾವರಿ, ವಿದ್ಯುತ್ ಉತ್ಪಾದನೆ ಮತ್ತು ಪ್ರವಾಸೋದ್ಯಮದ ಚಾಲನಾ ಶಕ್ತಿಯಾಗಿ ಬಹು ಹಂತದಲ್ಲಿ ದೇಶಕ್ಕೆ ಸೇವೆ ಸಲ್ಲಿಸಿದೆ. ರೈತನ ಮಗನಾಗಿ ಕೃಷಿಯಲ್ಲಿ ನೀರಾವರಿಯ ಮಹತ್ವವನ್ನು ಸದಾ ಕಾಲ ಒತ್ತಿ ಹೇಳುತ್ತಿರುತ್ತೇನೆ ಎಂದು ಅವರು ಹೇಳಿದ್ದಾರೆ.
ತುಂಗಭದ್ರಾ ಬಹು ಉದ್ದೇಶದ ಯೋಜನೆಯಾಗಿದ್ದು, ಇದು ನೀರಾವರಿಗೆ ಸೀಮಿತವಾಗಿಲ್ಲ. ಕುಡಿಯುವ ನೀರು, ಗಣನೀಯ ಪ್ರಮಾಣದಲ್ಲಿ ಹಸಿರು ಇಂಧನ ಉತ್ಪಾದನೆ, ಈ ವಲಯದಲ್ಲಿ ಕೈಗಾರಿಕಾಭಿವೃದ್ದಿಗೂ ಸಹಕಾರಿಯಾಗುವ ಮೂಲಕ ತನ್ನ ಹೆಸರನ್ನು ಸಾರ್ಥಕಗೊಳಿಸಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಅಣೆಕಟ್ಟೆಯ ಉದ್ದಕ್ಕೂ ಇರುವ ಸುಂದರ ಉದ್ಯಾನವನಗಳು ವಿಶ್ರಾಂತಿ ಪಡೆಯಲು ಸೂಕ್ತ ವಾತಾವರಣವನ್ನು ಒದಗಿಸುತ್ತದೆ. ಇದರ ಹಿನ್ನೆಲೆಯಲ್ಲಿ ಸೂರ್ಯಾಸ್ತವನ್ನು ನೋಡುವುದು ಭವ್ಯವಾಗಿರುತ್ತದೆ. ಇಲ್ಲಿನ ಕಮಾನುಗಳು, ಹೂಬಿಡುವ ಮರಗಳು, ಹೂವಿನ ಹಾಸುಗೆಗಳು, ಜಪಾನ್ ಪಾರ್ಕ್, ಹುಲ್ಲು ಹಾಸಿನ ಮೇಲೆ ನಡೆಯುವುದು ಯಾವಾಗಲೂ ನಮ್ಮನ್ನು ಉನ್ನತಿಗೇರಿಸುತ್ತದೆ. ರೆಡ್ ರೋಸ್ ಗಾರ್ಡನ್, ಸಂಗೀತ ನೃತ್ಯ ಕಾರಂಜಿ, ಸಣ್ಣ ಮೃಗಾಲಯ ಮತ್ತು ಪಂಜರಗಳನ್ನು ನೋಡಲು ಇಲ್ಲಿನ ಭೇಟಿ ಯೋಗ್ಯವೆನಿಸುತ್ತದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
`ತುಂಗಭದ್ರಾ ಜಲಾಶಯ ಯುನೆಸ್ಕೋದ ವಿಶ್ವ ಪಾರಂಪರಿಕ ತಾಣ ಹಂಪಿ ತುಂಗಭದ್ರಾ ಅಣೆಕಟ್ಟೆಗೆ ಸನಿಹದಲ್ಲಿದೆ. ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಭೇಟಿ ನೀಡಬೇಕಾದ ಪಟ್ಟಿಯಲ್ಲಿ ಇವು ಹೆಚ್ಚು ಆದ್ಯತೆ ಪಡೆಯುತ್ತದೆ. ಈ ಅವಳಿ ಪ್ರದೇಶಗಳು ಪ್ರಕೃತಿಯ, ವಿಶೇಷÀವಾಗಿ ಸಂತಸವನ್ನು ಅನುಭವಿಸಲು ದೇಶದ ಯುವ ಸಮೂಹ ಭೇಟಿ ನೀಡಲೇಬೇಕಾದ ತಾಣಗಳಾಗಿವೆ'-ವೆಂಕಟಯ್ಯನಾಯ್ಡು, ಉಪರಾಷ್ಟ್ರಪತಿ







