ಐಟಿ ಪೋರ್ಟಲ್ ನಲ್ಲಿಯ ತೊಡಕುಗಳ ಬಗ್ಗೆ ವಿವರಣೆ ನೀಡಲು ಇನ್ಫೋಸಿಸ್ ಸಿಇಒಗೆ ಸರಕಾರದ ಬುಲಾವ್
ಹೊಸದಿಲ್ಲಿ, ಆ.22: ಕಳೆದ ಜೂನ್ ನಿಂದ ಬಳಕೆಯಲ್ಲಿರುವ ನೂತನ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ನಲ್ಲಿಯ ತೊಡಕುಗಳ ಬಗ್ಗೆ ಸೋಮವಾರ,ಆ.23ರಂದು ತನ್ನೆದುರು ಖುದ್ದಾಗಿ ಹಾಜರಾಗಿ ವಿವರಣೆ ನೀಡುವಂತೆ ವಿತ್ತ ಸಚಿವಾಲಯವು ಇನ್ಫೋಸಿಸ್ ಸಿಇಒ ಸಲಿಲ್ ಪಾರೇಖ್ ಅವರಿಗೆ ಸೂಚಿಸಿದೆ. ಇದಕ್ಕೂ ಮುನ್ನ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ವಿಷಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಪೋರ್ಟಲ್ ಅನ್ನು ‘ಹೆಚ್ಚು ಮಾನವೀಯ ಮತ್ತು ಬಳಕೆದಾರ ಸ್ನೇಹಿ’ಯನ್ನಾಗಿಸುವ ಹೊಣೆಯನ್ನು ಪಾರೇಖ್ ಮತ್ತು ಇನ್ಫೋಸಿಸ್ ನ ಹಿರಿಯ ಅಧಿಕಾರಿ ಪ್ರವೀಣ ರಾವ್ ಅವರಿಗೆ ವಹಿಸಲಾಗಿತ್ತು ಎಂದು ವಿತ್ತಸಚಿವಾಲಯವು ಹೇಳಿತ್ತು.
‘ನೂತನ ಇ-ಫೈಲಿಂಗ್ ಪೋರ್ಟಲ್ ಆರಂಭಗೊಂಡು ಎರಡೂವರೆ ತಿಂಗಳುಗಳು ಕಳೆದರೂ ಅದರಲ್ಲಿಯ ದೋಷಗಳನ್ನು ಏಕೆ ನಿವಾರಿಸಿಲ್ಲ ಎನ್ನುವುದನ್ನು ಸೀತಾರಾಮನ್ ಅವರಿಗೆ ಖುದ್ದಾಗಿ ವಿವರಿಸುವಂತೆ ಪಾರೇಖ್ಗೆ ಸೂಚಿಸಲಾಗಿದೆ. ವಾಸ್ತವದಲ್ಲಿ ಆ.21ರಿಂದ ಪೋರ್ಟಲ್ ಲಭ್ಯವಾಗುತ್ತಿಲ್ಲ ’ಎಂದು ಆದಾಯ ತೆರಿಗೆ ಸಚಿವಾಲಯವು ಟ್ವೀಟಿಸಿದೆ.
ಇನ್ಫೋಸಿಸ್ ವಿನ್ಯಾಸಗೊಳಿಸಿರುವ ಪೋರ್ಟಲ್ ಕಾರ್ಯಾರಂಭ ಮಾಡಿದ ಬಳಿಕ ಅದರಲ್ಲಿ ಹಲವಾರು ತಾಂತ್ರಿಕ ಸಮಸ್ಯೆಗಳಿರುವುದು ಕಂಡು ಬಂದಿತ್ತು. ಬಳಕೆದಾರರು ತಾಣದ ಸ್ಕ್ರೀನ್ ಶಾಟ್ ಗಳನ್ನು ಟ್ವೀಟಿಸುವ ಮತ್ತು ಸೀತಾರಾಮನ್ ಅವರಿಗೆ ಟ್ಯಾಗ್ ಮಾಡುವ ಮೂಲಕ ಈ ಬಗ್ಗೆ ದೂರಿಕೊಂಡಿದ್ದರು.
ಪ್ರೊಫೈಲ್ ಪರಿಷ್ಕರಣೆ ಅಥವಾ ಪಾಸ್ವರ್ಡ್ ಬದಲಾವಣೆಯಂತಹ ಸರಳ ಕಾರ್ಯಗಳೂ ಸಮಸ್ಯೆಯಾಗುತ್ತಿದ್ದು,ಪೋರ್ಟಲ್ ಅತ್ಯಂತ ನಿಧಾನವಾಗಿ ಕೆಲಸ ಮಾಡುತ್ತಿದೆ ಮತ್ತು ಲಾಗಿನ್ ಆಗಲು ತುಂಬ ಸಮಯವನ್ನು ತೆಗೆದುಕೊಳ್ಳುತ್ತಿದೆ ಎಂದೂ ಹಲವಾರು ಬಳಕೆದಾರರು ದೂರಿದ್ದರು.
ಪೋರ್ಟಲ್ ಅಭಿವೃದ್ಧಿಗಾಗಿ ಸರಕಾರವು 2019 ಜನವರಿಯಿಂದ 2021 ಜೂನ್ ನಡುವಿನ ಅವಧಿಯಲ್ಲಿ ಇನ್ಫೋಸಿಸ್ ಗೆ 164.5 ಕೋ.ರೂ.ಗಳನ್ನು ಪಾವತಿಸಿದೆ.
ತೆರಿಗೆದಾರರಿಗೆ ತೊಂದರೆಯಾಗುತ್ತಿರುವುದರಿಂದ ಇನ್ನಷ್ಟು ವಿಳಂಬಿಸದೆ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವಂತೆ,ತಮ್ಮ ಸೇವೆಗಳನ್ನು ಉತ್ತಮಗೊಳಿಸುವಂತೆ ಮತ್ತು ದೂರುಗಳನ್ನು ಆದ್ಯತೆಯ ನೆಲೆಯಲ್ಲಿ ನಿವಾರಿಸುವಂತೆ ಇನ್ಫೋಸಿಸ್ಗೆ ಸೂಚಿಸಲಾಗಿತ್ತು ಎಂದು ಸಚಿವಾಲಯವು ತಿಳಿಸಿದೆ. ಇನ್ಫೋಸಿಸ್ ನ ಕಾರ್ಯ ನಿರ್ವಾಹಕೇತರ ಅಧ್ಯಕ್ಷ ನಂದನ ನಿಲೇಕಣಿ ಅವರು ಈವರೆಗೆ ಸೀತಾರಾಮನ್ ಅವರಿಗೆ ವಾರಕ್ಕೊವ್ಮೆು ವರದಿಯನ್ನು ಸಲ್ಲಿಸುತ್ತಿದ್ದರು. ತಾಂತ್ರಿಕ ದೋಷಗಳ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಅವರು,ಕೆಲವೇ ದಿನಗಳಲ್ಲಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಹೇಳಿದ್ದಾರೆ.
-





