ನೀರಿನ ಕೊರತೆಯಿಂದ ಸಿರಿಯಾ, ಇರಾಕ್ ನಲ್ಲಿ ಮಿಲಿಯಾಂತರ ಜನತೆಗೆ ಸಮಸ್ಯೆ : ಅಂತಾರಾಷ್ಟ್ರೀಯ ನೆರವು ಸಂಸ್ಥೆ ಎಚ್ಚರಿಕೆ

ಬೆರೂತ್, ಆ.23: ತಾಪಮಾನ ಏರಿಕೆ, ಮಳೆಯ ಕೊರತೆ ಮತ್ತು ಬರಗಾಲದಿಂದಾಗಿ ಸಿರಿಯಾ ಮತ್ತು ಇರಾಕ್ ನ ಮಿಲಿಯಾಂತರ ಜನರಿಗೆ ನೀರು, ವಿದ್ಯುತ್ಶಕ್ತಿ ಹಾಗೂ ಆಹಾರ ಅಲಭ್ಯವಾಗುವ ಅಪಾಯವಿದೆ ಎಂದು ಅಂತರಾಷ್ಟ್ರೀಯ ನೆರವು ಸಂಸ್ಥೆಗಳು ಎಚ್ಚರಿಸಿವೆ. ಹಲವು ವರ್ಷಗಳ ನಿರಂತರ ಅಂತರ್ಯುದ್ಧ ಹಾಗೂ ಕೆಟ್ಟ ನಿರ್ವಹಣೆಯಿಂದಾಗಿ ಅಸ್ತವ್ಯಸ್ತಗೊಂಡಿರುವ ಈ 2 ಅಕ್ಕಪಕ್ಕದ ದೇಶಗಳು ನೀರಿನ ತೀವ್ರ ಕೊರತೆಯ ಸಮಸ್ಯೆ ಎದುರಿಸಲು ತುರ್ತು ಕಾರ್ಯಯೋಜನೆ ರೂಪಿಸಬೇಕಾಗಿದೆ. ಬರಗಾಲದಿಂದ ನೀರಿನ ಸಮಸ್ಯೆ ಮತ್ತು ವಿದ್ಯುತ್ಶಕ್ತಿಯ ಕೊರತೆ ಎದುರಾಗಲಿದ್ದು ಇದರಿಂದ ಆರೋಗ್ಯ ವ್ಯವಸ್ಥೆಯಂತಹ ಮೂಲಸೌಕರ್ಯ ಪೂರೈಕೆಯ ಮೇಲೆ ಪರಿಣಾಮ ಬೀರಬಹುದು ಎಂದು ನೆರವು ಸಂಸ್ಥೆಗಳು ಹೇಳಿವೆ.
ಯುಪ್ರೇಟಸ್ ಮತ್ತು ಟಿಗ್ರಿಸ್ ನದಿ ನೀರಿನ ಮೇಲೆ ನೇರವಾಗಿ ಅವಲಂಬಿಸಿರುವ ಸಿರಿಯಾದ 5 ಮಿಲಿಯನ್ ಜನ ಸೇರಿದಂತೆ ಎರಡೂ ದೇಶಗಳಲ್ಲಿ 12 ಮಿಲಿಯನ್ಗೂ ಹೆಚ್ಚು ಜನರ ಮೇಲೆ ಪರಿಣಾಮ ಬೀರಲಿದೆ. ಬರಗಾಲದಿಂದ ಕನಿಷ್ಟ 7 ಮಿಲಿಯನ್ ಜನತೆ ತೊಂದರೆಗೆ ಸಿಲುಕಲಿದ್ದಾರೆ. ಸುಮಾರು 154 ಚದರ ಮೈಲಿನ ಕೃಷಿ ಭೂಮಿ ಬರಗಾಲದಿಂದ ಬರಡಾಗಿದೆ. ಸಿರಿಯಾದಲ್ಲಿ 3 ಮಿಲಿಯನ್ ಜನತೆಗೆ ವಿದ್ಯುತ್ ಪೂರೈಸಲು ನೆರವಾಗುತ್ತಿದ್ದ 2 ಅಣೆಕಟ್ಟುಗಳು ನೀರಿಲ್ಲದೆ ಕಾರ್ಯ ಸ್ಥಗಿತಗೊಳಿಸಿದೆ. ನೀರಿನ ಸಮಸ್ಯೆಯಿಂದಾಗಿ 4 ಲಕ್ಷಕ್ಕೂ ಅಧಿಕ ಇರಾಕ್ ಪ್ರಜೆಗಳು ಸಿರಿಯಾಕ್ಕೆ ಪಲಾಯನ ಮಾಡಿದ್ದು ಈ ಪ್ರಮಾಣ ಇನ್ನಷ್ಟು ಹೆಚ್ಚಲಿದೆ ಎಂದು ನೆರವು ಸಂಸ್ಥೆಗಳಲ್ಲಿ ಒಂದಾಗಿರುವ ನಾರ್ವೀಜಿಯನ್ ರೆಫ್ಯೂಜೀಸ್ ಕೌನ್ಸಿಲ್ನ ಪ್ರಾದೇಶಿಕ ನಿರ್ದೇಶಕ ಕಾರ್ಸ್ಟನ್ ಹ್ಯಾನ್ಸನ್ ಎಚ್ಚರಿಸಿದ್ದಾರೆ.
ಸಿರಿಯದ ಹಲವು ಪ್ರಾಂತ್ಯಗಳಲ್ಲಿ ನೀರಿನಿಂದ ಹರಡುವ ಕಾಯಿಲೆಗಳು ಉಲ್ಬಣಿಸಿವೆ ಎಂದು ಮರ್ಸಿ ಕಾರ್ಪ್ಸ್, ದಿ ಡ್ಯಾನಿಷ್ ರೆಫ್ಯೂಜಿ ಕೌನ್ಸಿಲ್, ಕ್ಯಾರ್ ಇಂಟರ್ನ್ಯಾಷನಲ್, ಆ್ಯಕ್ಷನ್ ಎಗೈನ್ಸ್ಟ್ ಹಂಗರ್ ಸಂಸ್ಥೆಗಳು ಹೇಳಿವೆ.







