ಮೀನಿನ ಅಂಗಡಿಗೆ ಬೆಂಕಿ: ಆರೋಪಿಗಳ ಬಂಧನಕ್ಕೆ ಹಿಂಜಾವೇ ಆಗ್ರಹ

ಉಪ್ಪಿನಂಗಡಿ: ಹಸಿ ಮೀನಿನ ಅಂಗಡಿಗೆ ಬೆಂಕಿ ಹಚ್ಚಿದ ಘಟನೆಯು ಒಂದು ಮೀನಿನ ಅಂಗಡಿಗೆ ಬೆಂಕಿ ಹಚ್ಚಿದ ಘಟನೆ ಅಲ್ಲ. ಅದು ಇಡೀ ಉಪ್ಪಿನಂಗಡಿಯನ್ನು ಹೊತ್ತಿಸುವ ಹುನ್ನಾರದ ಪ್ರಥಮ ಮೆಟ್ಟಿಲು. ಆದ್ದರಿಂದ ಇದಕ್ಕೆ ಕಾರಣರಾದ ಕಿಡಿಗೇಡಿಗಳನ್ನು 24 ಗಂಟೆಗಳೊಳಗೆ ಬಂಧಿಸಬೇಕು ಎಂದು ಹಿಂದೂ ಜಾಗರಣಾ ವೇದಿಕೆಯ ಗಣರಾಜ ಭಟ್ ಕೆದಿಲ ತಿಳಿಸಿದ್ದಾರೆ.
ಹಳೆಗೇಟಿನಲ್ಲಿ ಕಿಡಿಗೇಡಿಗಳಿಂದ ಬೆಂಕಿಗಾಹುತಿಯಾದ ಹಸಿ ಮೀನು ಮಾರಾಟದ ಶೆಡ್ ಅನ್ನು ವೀಕ್ಷಿಸಿ, ಬಳಿಕ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಬಂದು ಆರೋಪಿಗಳ ಬಂಧನಕ್ಕೆ ಮನವಿ ಸಲ್ಲಿಸಿದ ಅವರು, ಇಂತಹ ಘಟನೆಗೆ ಕಾರಣರಾದ ಕಿಡಿಗೇಡಿಗಳು ಯಾವುದೇ ಜಾತಿಯವರಿರಲಿ. 24 ಗಂಟೆಯೊಳಗೆ ಅವರನ್ನು ಬಂಧಿಸಬೇಕು ಎಂದು ಹಿಂದೂ ಜಾಗರಣಾ ವೇದಿಕೆಯಿಂದ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಶ್ರೀ ಸಹಸ್ರಲಿಂಗೇಶ್ವರ ಹಾಗೂ ಶ್ರೀ ಮಹಾಕಾಳಿ ಅಮ್ಮನವರ ದಯೆಯಿಂದ ಉಪ್ಪಿನಂಗಡಿಯಲ್ಲಿ ದುಷ್ಕರ್ಮಿಗಳ ಆಟ ನಡೆಯುವುದಿಲ್ಲ. ಉಪ್ಪಿನಂಗಡಿಯ ವಿರೋಧಿಯಾಗಿ, ಹಿಂದೂ ವಿರೋಧಿಯಾಗಿ ಬಂದವ ಇಲ್ಲಿ ಉಪ್ಪು ಕರಗಿದ ಹಾಗೆ ಕರಗಿ ಹೋಗುತ್ತಾನೆ ಅನ್ನೋ ನಂಬಿಕೆ ನಮಗಿದೆ. ಆದರೂ ಪೊಲೀಸರು ತಮ್ಮ ಕರ್ತವ್ಯವನ್ನು ಮಾಡಬೇಕು. ಆರೋಪಿಗಳನ್ನು ಕಾನೂನಿನಡಿ ತಂದು ನಿಲ್ಲಿಸಬೇಕು ಎಂದು ತಿಳಿಸಿದರು.
ಈ ಸಂದರ್ಭ ಚಿದಾನಂದ ಪೆರಿಯಡ್ಕ, ಸುಜೀತ್ ಬೊಳ್ಳಾವು, ಸಂದೀಪ್ ಕುಪ್ಪೆಟ್ಟಿ, ನವೀನ್ ಬಂಡಾಡಿ, ಕರುಣಾಕರ, ಅನಿಲ್, ರಾಜೇಶ್ ಕೊಡಂಗೆ ಮತ್ತಿತರರಿದ್ದರು.





