ಗಾಳಿ ಶುದ್ಧೀಕರಣ ಯಂತ್ರ ಖರೀದಿಯಿಂದ ಹಿಂದೆ ಸರಿದ ಬಿಬಿಎಂಪಿ

ಬೆಂಗಳೂರು, ಆ.23: ಮಲಿನ ಗಾಳಿಯನ್ನು ಶುದ್ಧೀಕರಿಸುವ ಯಂತ್ರ(ಹೊಂಜು ಗೋಪುರ)ಗಳನ್ನು ಖರೀದಿ ಮಾಡುವ ಪ್ರಸ್ತಾಪ ಪಾಲಿಕೆಯ ಮುಂದಿತ್ತು. ಆದರೆ, ಈಗ ಈ ಪ್ರಸ್ತಾಪವನ್ನು ಬದಿಗೆ ಸರಿಸಲಾಗಿದೆ.
ಬಿಬಿಎಂಪಿ ಪ್ರಾಯೋಗಿಕವಾಗಿ ಈ ಯಂತ್ರವನ್ನು ಬಿಬಿಎಂಪಿ ಕಚೇರಿ ಸಮೀಪದಲ್ಲೇ ಸ್ಥಾಪನೆ ಮಾಡಿತ್ತು. ಯಂತ್ರದ ಕಾರ್ಯವೈಖರಿಯನ್ನು ಅಧ್ಯಯನ ಮಾಡಲಾಗಿದೆ. ಆದರೆ, ಯಂತ್ರವನ್ನು ಖರೀದಿ ಮಾಡುವ ಪ್ರಸ್ತಾಪ ಬದಿಗೆ ಸರಿದಿದೆ.
ಯಂತ್ರಗಳನ್ನು ಖರೀದಿ ಮಾಡುವ ಕುರಿತು ವಿವರವಾದ ಯೋಜನಾ ವರದಿ ತಯಾರು ಮಾಡಿದ ಮೇಲೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಪ್ರಸ್ತುತ ಲಭ್ಯವಿರುವ ವಿವಿಧ ತಂತ್ರಜ್ಞಾನಗಳ ಕುರಿತು ಅಧ್ಯಯನ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬೆಂಗಳೂರು ನಗರದಲ್ಲಿ ವಾಯುಮಾಲಿನ್ಯ ಕಡಿಮೆ ಮಾಡಲು ಬಿಬಿಎಂಪಿ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಜಂಟಿಯಾಗಿ ಯೋಜನೆ ರೂಪಿಸಿದ್ದವು. 279 ಕೋಟಿ ರೂ.ಗಳ ಯೋಜನೆಯಡಿಯಲ್ಲಿಯೇ ಹೊಂಜು ಗೋಪುರ ಯಂತ್ರಗಳ ಖರೀದಿಯೂ ಸೇರಿತ್ತು. ಆದರೆ, ಈಗ ಹಿಂದೆ ಸರಿದಿದೆ.
ಕೋವಿಡ್ ಹರಡುವಿಕೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ಬೆಂಗಳೂರು ನಗರದಲ್ಲಿ ಮಾಲಿನ್ಯ ಪ್ರಮಾಣ ಕಡಿಮೆಯಾಗಿತ್ತು. ಈಗ ಪುನಃ ವಾಹನಗಳ ಸಂಚಾರ ಆರಂಭವಾಗಿದ್ದು, ಕೆಲವು ಪ್ರದೇಶಗಳಲ್ಲಿ ವಾಯುಮಾಲಿನ್ಯ ಹೆಚ್ಚಾಗುವ ಸಾಧ್ಯತೆ ಇದೆ.





