ಲೇಖಕಿ ದೀಪಾ ಹಿರೇಗುತ್ತಿಗೆ ಮಯೂರ ವರ್ಮ ಪ್ರಶಸ್ತಿ
ಬೆಂಗಳೂರು, ಆ.23: ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಜಂಟಿಯಾಗಿ ನೀಡುವ ಪ್ರತಿಷ್ಠಿತ ಮಯೂರ ವರ್ಮ ಪ್ರಶಸ್ತಿಗೆ ಖ್ಯಾತ ಲೇಖಕಿ ದೀಪಾ ಹಿರೇಗುತ್ತಿ ಅವರು ಭಾಜನರಾಗಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ 45 ವರ್ಷದೊಳಗಿನವರಿಗೆ ನೀಡಲಾಗುವ ಈ ಪ್ರಶಸ್ತಿ 25 ಸಾವಿರ ರೂ. ನಗದು ಹಾಗೂ ಪಾರಿತೋಷಕವನ್ನು ಒಳಗೊಂಡಿದ್ದು, ಆ.27ರ ಸಂಜೆ 4 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಪ್ರಶಸ್ತಿಗೆ ಭಾಜನರಾದ ದೀಪಾ ಹಿರೇಗುತ್ತಿ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆ, ಕುಮಟ ತಾಲೂಕಿನ ಹಿರೇಗುತ್ತಿಯವರು. ಶಿರಸಿ ಹಾಗೂ ಧಾರವಾಡದಲ್ಲಿ ವ್ಯಾಸಂಗ ಮಾಡಿದ ಇವರು ಉತ್ತಮ ಲೇಖಕಿ, ಉತ್ತಮ ವಾಗ್ಮಿ ಕೂಡ. ಇವರ ತಂದೆ ರಾಮಚಂದ್ರ ನಾಯಕ್ ಹಾಗೂ ತಾಯಿ ಭಾಗೀರಥಿ. ಇಬ್ಬರೂ ಕೂಡ ಶಿಕ್ಷಕರು.
ಸದ್ಯ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಪದವಿ ಪೂರ್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿಯಾಗಿ ಕೆಲಸ ನಿರ್ವಹಿಸುತ್ತಿರುವ ಇವರು ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ದೀಪಾ ಹಿರೇಗುತ್ತಿ ಫಿನಿಕ್ಸ್ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್‍ನ ನೀಲಗಂಗಾ ದತ್ತಿ ಪ್ರಶಸ್ತಿ ದೊರೆತಿದೆ. 2015ರಲ್ಲಿ ಸಾಹಿತ್ಯಕ್ಕಾಗಿ ಚಿಕ್ಕಮಗಳೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಇವರ ಮುಡಿಗೇರಿದೆ. ಪ್ರಸ್ತುತ ಕನ್ನಡ ಸಾಹಿತ್ಯ ಪರಿಷತ್‍ನ ಮಯೂರ ವರ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.







