ದೇಶದಲ್ಲಿ ಕೋವಿಡ್ ಲಸಿಕೆ 2ನೇ ಡೋಸ್ ತಪ್ಪಿಸಿಕೊಂಡವರೆಷ್ಟು ಗೊತ್ತೇ?

ಸಾಂದರ್ಭಿಕ ಚಿತ್ರ (Photo credit: PTI)
ಹೊಸದಿಲ್ಲಿ, ಆ.24: ದೇಶದಲ್ಲಿ ಕನಿಷ್ಠ 1.6 ಕೋಟಿ ಮಂದಿ ತಮ್ಮ ಕೋವಿಡ್-19 ಲಸಿಕೆಯ ಮೊದಲ ಡೋಸ್ ಪಡೆದು ಶಿಫಾರಸು ಮಾಡಲಾದ ಗರಿಷ್ಠ ಅವಧಿಯ ಬಳಿಕವೂ ಅಂದರೆ ಹದಿನಾರು ವಾರ ಕಳೆದರೂ ಎರಡನೇ ಡೋಸ್ ಪಡೆದಿಲ್ಲ. ಈ ಪೈಕಿ ಸುಮಾರು ಒಂದು ಕೋಟಿ ಮಂದಿ ಹಿರಿಯ ನಾಗರಿಕರು ಮತ್ತು ಇತರರು ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು ಹಾಗೂ 45 ವರ್ಷ ಮೇಲ್ಪಟ್ಟವರು.
ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಗಳ ಆಧಾರದಲ್ಲಿ ಹದಿನಾರು ವಾರಗಳ ಹಿಂದೆ ಅಂದರೆ ಮೇ 2ರವರೆಗೆ ಲಸಿಕೆ ಪಡೆದ ಯಾವ ವ್ಯಕ್ತಿಗಳ ಸಂಖ್ಯೆ ಮತ್ತು ಆ ಬಳಿಕ ಎರಡನೇ ಡೋಸ್ ಪಡೆದವರ ಸಂಖ್ಯೆಯನ್ನು ಹೋಲಿಸಿದಾಗ ಈ ಅಂಶ ಬಹಿರಂಗವಾಗಿದೆ.
ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ಪಡೆದ 12-16 ವಾರಗಳ ಅಂತರದಲ್ಲಿ ಎರಡನೇ ಡೋಸ್ ಪಡೆಯಲು ಮೇ 13ರಂದು ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. ಇದುವರೆಗೆ ನೀಡಲಾದ ಒಟ್ಟು ಲಸಿಕೆಯ ಪೈಕಿ ಶೇಕಡ 85ರಷ್ಟು ಕೋವಿಶೀಲ್ಡ್ ಲಸಿಕೆಯಾಗಿರುತ್ತದೆ. ಕೋವ್ಯಾಕ್ಸಿನ್ ಎರಡು ಡೋಸ್ಗಳ ನಡುವಿನ ಅಂತರ 4-6 ವಾರಗಳು. ಹದಿನಾರು ವಾರ ಕಳೆದರೂ ಎರಡನೇ ಡೋಸ್ ಪಡೆಯದವರ ಸಂಖ್ಯೆ ಇನ್ನೂ ಅಧಿಕವಿರುವ ಸಾಧ್ಯತೆ ಇದೆ. ಏಕೆಂಧರೆ ಈ ಲೆಕ್ಕಾಚಾರವು ಕೋವಿಶೀಲ್ಡ್ನ 16 ವಾರಗಳ ಅಂತರವನ್ನು ಆಧರಿಸಿದ್ದು, ಕೋವ್ಯಾಕ್ಸ್ನ 6 ವಾರಗಳ ಅಂತರವನ್ನು ಪರಿಗಣಿಸಿಲ್ಲ. ಅದ್ದರಿಂದ ಎರಡೂ ಡೋಸ್ಗಳನ್ನು ಪಡೆದವರ ಸಂಖ್ಯೆ, ಮೇ 2ರ ಬಳಿಕ ಮೊದಲ ಡೋಸ್ ಪಡೆದವರ ಸಂಖ್ಯೆಯನ್ನೂ ಒಳಗೊಳ್ಳುತ್ತದೆ.
ಎರಡನೇ ಡೋಸ್ ಪಡೆಯಲು ಅರ್ಹರ ಸಂಖ್ಯೆ ಅಂದರೆ ಮೊದಲ ಡೋಸ್ ಪಡೆದು 12 ವಾರ ಮೀರಿದವರ ಸಂಖ್ಯೆ 3.9 ಕೋಟಿ ಆಗಿದೆ.
ಸರ್ಕಾರದ ಅಂಕಿ ಅಂಶಗಳ ಪ್ರಕಾರ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರು, 45-59 ವರ್ಷದ ವಯೋಮಿತಿಯವರು ಮತ್ತು 60 ವರ್ಷ ಮೇಲ್ಪಟ್ಟವರು ಸೇರಿದಂತೆ 12.8 ಕೋಟಿ ಮಂದಿ ಮೇ 2ರವರೆಗೆ ಮೊದಲ ಡೋಸ್ ಪಡೆದಿದ್ದರು. ಈ ಪೈಕಿ 11.2 ಕೋಟಿ ಮಾತ್ರ ಎರಡನೇ ಡೋಸ್ ಪಡೆದಿದ್ದಾರೆ.
1.6 ಕೋಟಿ ಮಂದಿಯ ಪೈಕಿ 45 ಲಕ್ಷದಷ್ಟು ಮಂದಿ 45-59 ವಯೋಮಿತಿಯವರು; 12 ಲಕ್ಷ ಮಂದಿ ಆರೋಗ್ಯ ಕಾರ್ಯಕರ್ತರು ಮತ್ತು 1.8 ಲಕ್ಷ ಮಂದಿ ಮುಂಚೂಣಿ ಕಾರ್ಯಕರ್ತರು.







