ಆ.29: ಪುತ್ತೂರಿನಲ್ಲಿ ನವೋದಯ ಸೌಹಾರ್ದ ಸಹಕಾರಿಯ 14ನೇ ಶಾಖೆ ಉದ್ಘಾಟನೆ
ಪುತ್ತೂರು, ಆ.24: ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರಿಂದ ಸ್ಥಾಪಿತಗೊಂಡ ನವೋದಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಸ್ಥೆಯ 14ನೇ ಶಾಖೆಯು ಆ.29ರಂದು ಪುತ್ತೂರಿನ ನೆಲ್ಲಿಕಟ್ಟೆಯಲ್ಲಿರುವ ರೈ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೋಟ್ಟು ತಿಳಿಸಿದ್ದಾರೆ.
ಅವರು ಮಂಗಳವಾರ ಪುತ್ತೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೂತನ ಶಾಖೆಯನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಲಿದ್ದಾರೆ. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಭದ್ರತಾ ಕೊಠಡಿಯನ್ನು ಪುತ್ತೂರು ನಗರಸಭೆಯ ಅಧ್ಯಕ್ಷ ಕೆ. ಜೀವಂಧರ್ ಜೈನ್ ಉದ್ಘಾಟಿಸಲಿದ್ದಾರೆ. ಗಣಕೀಕರಣವನ್ನು ದ.ಕ. ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೋಟ್ಟು ಉದ್ಘಾಟಿಸಲಿದ್ದಾರೆ. ದ.ಕ. ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕ ಎಸ್.ಬಿ. ಜಯರಾಮ ರೈ ಅವರು ಪ್ರಥಮ ಠೇವಣಿ ಪತ್ರ ಬಿಡುಗಡೆ ಮಾಡಲಿದ್ದಾರೆ. ದ.ಕ. ಕೃಷಿ ಅಭಿವೃದ್ಧಿ ಸಹಕಾರ ಸಂಘದ ಅಧ್ಯಕ್ಷ ರವೀಂದ್ರ ಕಂಬಳಿ ಹೊಸ ಸ್ವ ಸಹಾಯ ಸಂಘಗಳನ್ನು ಉದ್ಘಾಟಿಸಲಿದ್ದಾರೆ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಮತ್ತು ಕಟ್ಟಡದ ಮಾಲಕ ರೋಶನ್ ರೈ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸೌಹಾರ್ದ ಸಹಕಾರಿಯಲ್ಲಿ ಒಟ್ಟು 10,386 ಸದಸ್ಯರಿದ್ದು, ಒಟ್ಟು ರೂ. 156.80 ಲಕ್ಷ ಪಾಲು ಬಂಡವಾಳವನ್ನು ಹೊಂದಿರುತ್ತದೆ. ರೂ. 4840.00 ಲಕ್ಷ ಠೇವಣಿ ಸಂಗ್ರಹವಾಗಿರುತ್ತದೆ. ಒಟ್ಟು ರೂ. 4602.89 ಹೊರ ಬಾಕಿ ಸಾಲವಿದ್ದು, ರೂ. 415.98 ಲಕ್ಷ ನಿಧಿ ಸಂಗ್ರಹಿಸಲಾಗಿದೆ. ರೂ. 379.26 ಲಕ್ಷ ವಿವಿಧ ಸಹಕಾರಿ ಸಂಘಗಳಲ್ಲಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ವಿನಿಯೋಗಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಹಕಾರಿ ಸಂಸ್ಥೆಯ ಸದಸ್ಯರಲ್ಲಿ ಸ್ವಸಹಾಯ ಮತ್ತು ಉಳಿತಾಯ ಮನೋಭಾವನೆಯನ್ನು ವೃದ್ಧಿಸುವುದು. ಸದಸ್ಯರ ಆರ್ಥಿಕ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸುವುದು. ಗ್ರಾಮೀಣ ಪ್ರದೇಶದ ಯುವಕ ಯುವತಿಯರಿಗೆ ಸ್ವ ಉದ್ಯೋಗ ಪ್ರಾರಂಭಿಸಲು ಆರ್ಥಿಕ ಸೌಲಭ್ಯ ನೀಡಲಾಗುವುದು. ಮಂಗಳೂರಿನ ವೆಂಟಕ್ರಮಣ ಆರ್ಕೆಡ್‌ನಲ್ಲಿ ಮುಖ್ಯ ಶಾಖೆ ಹೊಂದಿರುವ ಸಂಸ್ಥೆಯು ಈಗಾಗಲೇ ತೀರ್ಥಹಳ್ಳಿ, ವೇಣೂರು, ಕೋಣಂದೂರು, ಶಿರಸಿ, ಕಾರ್ಕಳ, ಹೊನ್ನಾವರ, ಸಾಗರ, ಭಟ್ಕಳ, ರಿಪ್ಪನ್ ಪೇಟೆ, ಕುಮಟಾ, ಕಾರವಾರ, ಅಂಕೋಲಾಗಳಲ್ಲಿ ಶಾಖೆಗಳನ್ನು ಹೊಂದಿದ್ದು ಕರ್ತವ್ಯ ನಿರ್ವಹಿಸುತ್ತಿದೆ. ಇದೀಗ ನೂತನ 14ನೇ ಶಾಖೆಯು ಪುತ್ತೂರಿನಲ್ಲಿ ಆರಂಭಗೊಳ್ಳಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ನವೋದಯ ಸಹಕಾರಿಯ ಟ್ರಸ್ಟಿ ಸುನೀಲ್ ಬಜಾಲ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾಸು, ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್, ವ್ಯವಸ್ಥಾಪಕ ರತ್ನ ಕುಮಾರ್ ಉಪಸ್ಥಿತರಿದ್ದರು.







