“ನಮ್ಮದು ತಾಲಿಬಾನ್ ದೇಶವಲ್ಲ'': ಹಿಂದುತ್ವ ಸಂಘಟನೆ ನಾಯಕನ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದ ದಿಲ್ಲಿ ಕೋರ್ಟ್

ಹೊಸದಿಲ್ಲಿ: ಮತೀಯ ಘೋಷಣೆಗಳನ್ನು ಕೂಗಿದ ಆರೋಪ ಎದುರಿಸುತ್ತಿರುವ ಹಿಂದು ರಕ್ಷಾ ದಳ ಅಧ್ಯಕ್ಷ ಭೂಪೀಂದರ್ ತೋಮರ್ ಎಂಬಾತನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದಿಲ್ಲಿಯ ನ್ಯಾಯಾಲಯ ವಜಾಗೊಳಿಸಿದೆಯಲ್ಲದೆ ``ನಮ್ಮದು ತಾಲಿಬಾನ್ ದೇಶವಲ್ಲ,'' ಎಂದು ಹೇಳಿದೆ.
ಈ ಹಿಂದೆ ಇಂತಹ ಘಟನೆಗಳು ಮತೀಯ ಉದ್ವಿಗ್ನತೆಗೆ ಹಾಗೂ ದಂಗೆಗಳಿಗೆ ಕಾರಣವಾಗಿ ಆಸ್ತಿಪಾಸ್ತಿ ಹಾಗೂ ಪ್ರಾಣ ನಷ್ಟ ಉಂಟು ಮಾಡಿವೆ ಎಂಬ ಕಾರಣಕ್ಕಾಗಿ ಈ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅನಿಲ್ ಅಂತಿಲ್ ವಜಾಗೊಳಿಸಿದ್ದಾರೆ.
ಆಗಸ್ಟ್ 8ರಂದು ರಾಜಧಾನಿಯ ಜಂತರ್ ಮಂತರ್‍ನಲ್ಲಿ ನಡೆದ ರ್ಯಾಲಿಯೊಂದರಲ್ಲಿ ಒಂದು ನಿರ್ದಿಷ್ಟ ಕೋಮಿನ ವಿರುದ್ಧ ಹಿಂಸೆಗೆ ಪ್ರೇರೇಪಿಸುವ ಮತೀಯ ಘೋಷಣೆಗಳನ್ನು ಕೂಗಿದ ಆರೋಪವನ್ನು ತೋಮರ್ ಎದುರಿಸುತ್ತಿದ್ದಾರೆ.
"ನಮ್ಮದು ತಾಲಿಬಾನ್ ದೇಶವಲ್ಲ. ಈ ದೇಶದ ನೆಲದ ಕಾನೂನು ಪವಿತ್ರವಾಗಿದೆ. ಇಡೀ ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದ್ದರೆ ಕೆಲವು ಮನಸ್ಸುಗಳು ಇನ್ನೂ ಅಸಹಿಷ್ಣುತೆಯ ಹಾಗೂ ಸ್ವಹಿತಾಸಕ್ತಿಯ ಭಾವನೆಗಳಲ್ಲಿ ಬಂಧಿಯಾಗಿವೆ,'' ಎಂದು ಆಗಸ್ಟ್ 21ರಿಂದ ನೀಡಿದ ಆದೇಶದಲ್ಲಿ ನ್ಯಾಯಾಲಯ ಹೇಳಿದೆ.







