ಶಿವಮೊಗ್ಗ: ಸೀರೆಯಿಂದ ಕಟ್ಟಿದ್ದ ಜೋಕಾಲಿ ಕುತ್ತಿಗೆಗೆ ಸಿಲುಕಿ ಬಾಲಕ ಸಾವು

ಶಿವಮೊಗ್ಗ(ಆ.24): : ಸೀರೆಯಿಂದ ಕಟ್ಟಿದ್ದ ಜೋಕಾಲಿ ಆಟವಾಡುತ್ತಿದ್ದಾಗ ಬಾಲಕನ ಕುತ್ತಿಗೆಗೆ ಸಿಲುಕಿ ಮೃತಪಟ್ಟಿರುವ ಘಟನೆ ನಗರದ ಜಯನಗರದಲ್ಲಿ ಸಂಭವಿಸಿದೆ.
ಭದ್ರಾವತಿ ತಾಲೂಕು ಅರಹತೊಳಲು ಗ್ರಾಮದ ಭರತ್ (12) ಮೃತ ಬಾಲಕ.
ಹೇಗಾಯ್ತು ಘಟನೆ?
ಹಲ್ಲಿನ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಭರತ್ ತನ್ನ ತಾಯಿಯೊಂದಿಗೆ ಶಿವಮೊಗ್ಗಕ್ಕೆ ಆಗಮಿಸಿದ್ದ. ಬಳಿಕ ಜಯನಗರದಲ್ಲಿರುವ ಸಂಬಂಧಿಕರ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಮನೆಯ ಕೊಠಡಿಯಲ್ಲಿ ಸೀರೆಯಿಂದ ಕಟ್ಟಿದ್ದ ಜೋಕಾಲಿಯಲ್ಲಿ ಭರತ್ ಆಟವಾಡುತ್ತಿದ್ದ.
ಸಮೀಪದಲ್ಲೇ ಇದ್ದ ಮತ್ತೊಬ್ಬ ಸಂಬಂಧಿಕರ ಮನೆಗೆ ಭರತನ ತಾಯಿ ತೆರಳಿದ್ದರು. ಹಿಂತಿರುಗಿದಾಗ ಕೊಠಡಿಯಲ್ಲಿ ಭರತ ಮಂಡಿಯೂರಿ ಕೂತಂತೆ ಕಂಡಿತು. ಪರಿಶೀಲಿಸಿದಾಗ ಭರತ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ. ಕೂಡಲೆ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪರಿಶೀಲಿಸಿದ ವೈದ್ಯರು ಭರತ್ ಮೃತನಾಗಿರುವುದಾಗಿ ತಿಳಿಸಿದ್ದಾರೆ.
ಘಟನೆ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Next Story





