ಕೇಂದ್ರ ಸಚಿವ ರಾಣೆ ಬಂಧನವು ಸಾಂವಿಧಾನಿಕ ಮೌಲ್ಯಗಳ ಉಲ್ಲಂಘನೆ: ಜೆ.ಪಿ. ನಡ್ಡಾ

ಹೊಸದಿಲ್ಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕುರಿತು ಕೇಂದ್ರ ಸಚಿವ ನಾರಾಯಣ್ ರಾಣೆ ನೀಡಿರುವ ವಿವಾದಾತ್ಮಕ ಹೇಳಿಕೆಗಳಿಂದ ಬಿಜೆಪಿ ಅಂತರ ಕಾಯ್ದುಕೊಂಡಿದೆ, ಆದರೆ ಅದೇ ಸಮಯದಲ್ಲಿ ಕೇಂದ್ರ ಸಚಿವರನ್ನು ಬೆಂಬಲಿಸಿದೆ.
ಕೇಂದ್ರ ಸಚಿವರಾದ ರಾಣೆ ಅವರ ಬಂಧನವು "ಸಾಂವಿಧಾನಿಕ ಮೌಲ್ಯಗಳ ಉಲ್ಲಂಘನೆ" ಎಂದು ಪಕ್ಷದ ರಾಷ್ಟ್ರಾದ್ಯಕ್ಷ ಸ್ಥ ಜೆ.ಪಿ. ನಡ್ಡಾ ಹೇಳಿದರೆ, ಇದು "ತಾಲಿಬಾನ್ ತರಹದ ಆಡಳಿತ" ಎಂದು ರಾಜ್ಯದ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ರಾಣೆ ಅವರ ಟೀಕೆಗಳನ್ನು ಬಿಜೆಪಿ ಬೆಂಬಲಿಸುವುದಿಲ್ಲ, ಆದರೆ "ಪಕ್ಷವು ಅವರ ಹಿಂದೆ 100 ಪ್ರತಿಶತದಷ್ಟು ನಿಂತಿದೆ" ಎಂದು ಫಡ್ನವೀಸ್ ಹೇಳಿದರು.
ರಾಜ್ಯ ಪೊಲೀಸ್ ಪಡೆಯನ್ನು "ದ್ವೇಷದ ರಾಜಕೀಯ" ದ ಅಸ್ತ್ರವಾಗಿ ಬಳಸಲಾಗುತ್ತಿದೆ ಎಂದು ಆರೋಪಿಸಿದ ಮಾಜಿ ಮುಖ್ಯಮಂತ್ರಿ ಫಡ್ನವಿಸ್, ಕಾನೂನು ಹಾಗೂ ಸುವ್ಯವಸ್ಥೆ ಇರಬೇಕು. ಆದರೆ "ತಾಲಿಬಾನ್ ರೀತಿಯ ಆಡಳಿತವಲ್ಲ" ಎಂದು ಹೇಳಿದರು.
ರಾಜ್ಯ ಸರಕಾರದ ಕ್ರಮವನ್ನು "ದ್ವೇಷ ರಾಜಕೀಯ" ಎಂದು ಕರೆದ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, "ಜನ-ಆಶೀರ್ವಾದ ಯಾತ್ರೆಯಲ್ಲಿ ಬಿಜೆಪಿ ಪಡೆಯುತ್ತಿರುವ ಅಪಾರ ಬೆಂಬಲದಿಂದ ಈ ಜನರು ತೊಂದರೆಗೀಡಾಗಿದ್ದಾರೆ" ಎಂದು ಹೇಳಿದರು.
"ಮಹಾರಾಷ್ಟ್ರ ಸರಕಾರದಿಂದ ಕೇಂದ್ರ ಸಚಿವ ನಾರಾಯಣ್ ರಾಣೆ ಅವರನ್ನು ಬಂಧಿಸಿರುವುದು ಸಾಂವಿಧಾನಿಕ ಮೌಲ್ಯಗಳ ಉಲ್ಲಂಘನೆಯಾಗಿದೆ. ಇಂತಹ ಕ್ರಮದಿಂದ ನಾವು ಹೆದರುವುದಿಲ್ಲ ಅಥವಾ ದಮನಿಸಲ್ಪಡುವುದಿಲ್ಲ. ನಾವು ಪ್ರಜಾಸತ್ತಾತ್ಮಕವಾಗಿ ಹೋರಾಡುತ್ತೇವೆ, ಪ್ರಯಾಣ ಮುಂದುವರಿಯುತ್ತದೆ" ಎಂದು ನಡ್ಡಾ ಹೇಳಿದರು.







