70 ವರ್ಷಗಳಲ್ಲಿ ಗಳಿಸಿದ್ದ ಸ್ವತ್ತುಗಳನ್ನು ಕೇಂದ್ರ ಸರಕಾರ ಮಾರಾಟ ಮಾಡುತ್ತಿದೆ: ರಾಹುಲ್ ಗಾಂಧಿ ಆರೋಪ

ಹೊಸದಿಲ್ಲಿ: ಕೇಂದ್ರ ಸರಕಾರದ ರಾಷ್ಟ್ರೀಯ ಹಣಗಳಿಕೆಯ ಪೈಪ್‌ಲೈನ್ (ಎನ್‌ಎಂಪಿ) ಯೋಜನೆ ವಿರುದ್ಧ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳವಾರ ವಾಗ್ದಾಳಿ ನಡೆಸಿದರು. ಬಿಜೆಪಿ ನೇತೃತ್ವದ ಸರಕಾರವು ಕಳೆದ 70 ವರ್ಷಗಳಲ್ಲಿ ಗಳಿಸಿದ್ದ ಎಲ್ಲಾ ಸ್ವತ್ತುಗಳನ್ನು ಪ್ರಧಾನ ಮಂತ್ರಿಯ "ಕೈಗಾರಿಕೋದ್ಯಮಿ ಸ್ನೇಹಿತರಿಗೆ" ಮಾರಾಟ ಮಾಡುತ್ತಿದೆ ಎಂದು ಆರೋಪಿಸಿದರು.
"ನರೇಂದ್ರ ಮೋದಿ ನೇತೃತ್ವದ ಸರಕಾರವು ಹಿಂದಿನ ಸರಕಾರಗಳು 70 ವರ್ಷಗಳಲ್ಲಿ ಸಾರ್ವಜನಿಕರ ಹಣದಿಂದ ನಿರ್ಮಿಸಿದ ಭಾರತದ ಕಿರೀಟದ ಆಭರಣಗಳನ್ನು ಮಾರಾಟ ಮಾಡುವ ಪ್ರಕ್ರಿಯೆಯಲ್ಲಿದೆ" ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ರಾಹುಲ್ ಹೇಳಿದರು.
ಬಿಜೆಪಿ ಸರಕಾರದ ಖಾಸಗೀಕರಣ ಯೋಜನೆ ಪ್ರಮುಖ ಕ್ಷೇತ್ರಗಳಲ್ಲಿ ಏಕಸ್ವಾಮ್ಯವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ ಹಾಗೂ ಇದು ಉದ್ಯೋಗಗಳನ್ನು ಕೊಲ್ಲುತ್ತದೆ ಎಂದು ಕಾಂಗ್ರೆಸ್ ನಾಯಕ ಆರೋಪಿಸಿದ್ದಾರೆ.
ಸರಕಾರದ ಮೂಲಸೌಕರ್ಯ ಹಣಗಳಿಕೆಯ ಯೋಜನೆಯನ್ನು "ಕಾನೂನುಬದ್ಧ ಲೂಟಿ ಹಾಗೂ ಸಂಘಟಿತ ಲೂಟಿ" ಎಂದು ಕಾಂಗ್ರೆಸ್ ಬಣ್ಣಿಸಿದೆ. ದಶಕಗಳಿಂದ ಸೃಷ್ಟಿಯಾದ ಅಮೂಲ್ಯ ಸಾರ್ವಜನಿಕ ಸ್ವತ್ತುಗಳನ್ನು ಆಯ್ದ ಕೆಲವರಿಗೆ ಹಸ್ತಾಂತರಿಸಲಾಗುತ್ತಿದೆ. ಜನರ ಶ್ರಮದಿಂದ ಮಾಡಿದ ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಸರಕಾರವು ತನ್ನ ಕೋಟ್ಯಧಿಪತಿ "ಸ್ನೇಹಿತರಿಗೆ" ನೀಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಕಳೆದ 70 ವರ್ಷಗಳಲ್ಲಿ ರಚಿಸಲಾದ ಎಲ್ಲಾ ಸ್ವತ್ತುಗಳನ್ನು ಬಿಜೆಪಿ ಸರಕಾರವು ಮಾರಾಟ ಮಾಡುತ್ತಿದೆ. ನರೇಂದ್ರ ಮೋದಿ ನೇತೃತ್ವದ ಸರಕಾರವು ತನ್ನ ಕೆಲವು ಕೈಗಾರಿಕೋದ್ಯಮಿ ಸ್ನೇಹಿತರಿಗೆ ರಾಷ್ಟ್ರೀಯ ಹಣ ಗಳಿಕೆಯ ಪೈಪ್‌ಲೈನ್ ಮೂಲಕ ಲಾಭ ಮಾಡಿಕೊಡಲು ಬಯಸಿದೆ ಎಂದು ಆರೋಪಿಸಿದರು.







