ಕಾಪು ಮಾರ್ಕೆಟ್ ಅಭಿವೃದ್ಧಿಗೆ ಪ್ರಸ್ತಾವನೆ: ಶಾಸಕ ಲಾಲಾಜಿ ಮೆಂಡನ್

ಕಾಪು: ಕಾಪು ಹಳೆ ಮೀನುಮಾರ್ಕೆಟ್‍ನ್ನು ಸುಸಜ್ಜಿತ ಮೀನು ಮಾರುಕಟ್ಟೆಯನ್ನಾಗಿ 5 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುಮೋದನೆ ಹಂತದಲ್ಲಿದೆ ಎಂದು ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದರು.
ಮಂಗಳವಾರ ಮೀನುಗಾರಿಕಾ ಇಲಾಖೆಯ ವತಿಯಿಂದ ಕಾಪು ಮೀನು ಮಾರ್ಕೆಟ್‍ನಲ್ಲಿ ಮೀನುಗಾರ ಮಹಿಳೆಯರಿಗೆ ಮೀನು ಬಾಕ್ಸ್ ಅನ್ನು ವಿತರಿಸಿ ಮಾತನಾಡಿದರು.
ಈಗಿರುವ ಮೀನುಮಾರುಕಟ್ಟೆಯನ್ನು ಕೆಡವಿ ಸುಸಜ್ಜಿತವಾದ ಹಸಿ ಹಾಗೂ ಒಣ ಮೀನು ಮಾರ್ಕೆಟ್, ತರಕಾರಿ ಮಾರ್ಕೆಟ್‍ನ್ನು ಆಧುನಿಕ ತಂತ್ರಜ್ಞಾನದಲ್ಲಿ ಸುಸಜ್ಜಿತವಾಗಿ ನಿರ್ಮಿಸಲಾಗುವುದು. ಈ ಬಗ್ಗೆ ಈಗಾಗಲೇ ನೀಲನಕಾಶೆ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಪುವಿನ ಸುಮಾರು 60 ಮೀನು ಮಾರಾಟ ಮಾಡುವ ಮಹಿಳೆಯರಿಗೆ 1.80 ಲಕ್ಷ ರೂ, ವೆಚ್ಚದಲ್ಲಿ ಮೀನು ಮಾರಾಟದ ಶೀತಲೀಕರಣ ಬಾಕ್ಸ್‍ನ್ನು ವಿತರಿಸಲಾಯಿತು.
ಮೀನುಗಾರಿಕೆ ಇಲಾಖೆಯ ನಿರ್ದೇಶಕ ಗಣೇಶ್, ಉಪನಿರ್ದೇಶಕರು ಶಿವಕುಮಾರ್, ಮುಖ್ಯಾಧಿಕಾರಿ ವೆಂಕಟೇಶ ನಾವಡ, ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ದಿವಾಕರ್ ಕಾರ್ವಿ, ಕಾಪು ಹಸಿ ಮತ್ತು ಒಣ ಮೀನು ಸಂಘದ ಅಧ್ಯಕ್ಷೆ ಶಾಂತ, ಕಾಪು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಬಾನುಮತಿ ಮೆಂಡನ್, ಕಾಪು ಮಾರ್ಕೆಟ್ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ರಾಮ ನಾಯಕ್, ಕಾರ್ಯದರ್ಶಿ ಜಗದೀಶ್ ಹಾಗು ಬಿಜೆಪಿ ಮುಖಂಡ ನಝೀರ್ ಉಪಸ್ಥಿತರಿದ್ದರು.







