ಕಲಬುರಗಿ ಜಿಲ್ಲೆಯ ಜನ ಸೋಂಬೇರಿಗಳು ಎಂಬ ಸಚಿವ ನಿರಾಣಿ ಹೇಳಿಕೆ ವಿರುದ್ಧ ಆಕ್ರೋಶ: ಕ್ಷಮೆಗೆ ಪ್ರಿಯಾಂಕ್ ಖರ್ಗೆ ಪಟ್ಟು

ಕಲಬುರಗಿ: 'ಜಿಲ್ಲೆಯ ಜನ ಸೋಂಬೇರಿಗಳು' ಎಂದ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಅವರಿಗೆ ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ವ್ಯಂಗ್ಯದ ಧಾಟಿಯಲ್ಲಿ ತಿರುಗೇಟು ನೀಡಿದ್ದಾರೆ.
ಈ ಕುರಿತು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, 'ಕನ್ನಡದ ಮೊಟ್ಟ ಮೊದಲ ರಾಜ ಸಂಸ್ಥಾನವಾದ ರಾಷ್ಟ್ರಕೂಟರು, ಕನ್ನಡದ ಮೊಟ್ಟಮೊದಲ ಗ್ರಂಥ ಕವಿರಾಜ ಮಾರ್ಗ ನೀಡಿದವರು, ನಿಜಾಮರೊಂದಿಗೆ ಹೋರಾಟ ಮಾಡಿದವರು, ಭಾವೈಕ್ಯತೆಯ ಪ್ರತೀಕವಾದ ಶರಣಬಸವೇಶ್ವರ ದೇವಾಲಯ, ಖಾಜಾ ಬಂದೇನವಾಜ ದರ್ಗಾ ಹಾಗೂ ಬುದ್ಧ ವಿಹಾರ ನಿರ್ಮಿಸಿದರು ಸೋಂಬೇರಿಗಳು' ಎಂದು ವ್ಯಂಗ್ಯವಾಗಿ ತಿವಿದಿದ್ದಾರೆ.
ರಾಜ್ಯದಲ್ಲಿಯೇ ಅತಿಹೆಚ್ಚು ತೊಗರಿ ಬೆಳೆಯುವ ಇಲ್ಲಿನ ರೈತರು, ಕೇಂದ್ರಿಯ ವಿವಿ ಹೊಂದಿರುವ ಕಲಬುರಗಿ ಜನ ಹಾಗೂ ಏಷ್ಯಾದಲ್ಲಿಯೇ ಅತಿಹೆಚ್ಚು ಸಿಮೆಂಟ್ ಉತ್ಪಾದಿಸುವ ಜನರು ಹಾಗೂ ಆರ್ಟಿಕಲ್ 371 J ಜಾರಿಯಾಗಲು ಹೋರಾಡಿದವರು, ಏರ್ಪೋರ್ಟ್ ನಿರ್ಮಾಣ, ಜೇವರ್ಗಿ ಏತನೀರಾವರಿ, ಬೆಣ್ಣೆತೊರೆ ಯೋಜನರ, ಜಯದೇವ, ಜಿಮ್ಸ್ ಹಾಗೂ ಇಎಸ್ ಐಸಿ ಆಸ್ಪತ್ರೆಗಳ ನಿರ್ಮಾಣಕ್ಕಾಗಿ ಸಾವಿರಾರು ಕೋಟಿ ಅನುದಾನ ತಂದ ರಾಜಕಾರಣಿಗಳನ್ನು ಹೊಂದಿರುವ ಜನರು ಸೋಂಬೇರಿಗಳು. ಆದರೆ, ಐದು ಜನ ಶಾಸಕರನ್ನು ನೀಡಿದ್ದರೂ ಕೂಡಾ ಜಿಲ್ಲೆಗೆ ಒಂದೇ ಒಂದು ಸಚಿವ ಸ್ಥಾನ ನೀಡದ ಬಿಜೆಪಿಗರು ಸೋಂಬೇರಿಗಳಲ್ಲ.
ಮಂಜೂರಾಗಿರುವ ಯೋಜನೆಗಳಾದ ಟೆಕ್ಸಟೈಲ್ ಪಾರ್ಕ್, ಪ್ರತ್ಯೇಕ ರೇಲ್ವೆವಿಭಾಗ ಜಾರಿಗೆ ಮಾಡದ ಬಿಜೆಪಿಗರು ಸೋಂಬೇರಿಗಳಲ್ಲ. ಕೆಕೆಆರ್ ಡಿಬಿಗೆ ಘೋಷಿತ ವಾರ್ಷಿಕ ಅನುದಾನ ತರದ ಬಿಜೆಪಿಗರು, ಮುಲ್ಲಾಮಾರಿ ಯೋಜನೆಯಲ್ಲಿ ಹಣ ಲೂಟಿ ಮಾಡಿ ಇನ್ನೂ ಕಾಮಗಾರಿ ಮುಗಿಸದ ಬಿಜೆಪಿಗರು ಸೋಂಬೇರಿಗಳಲ್ಲಾ. ಕೋವಿಡ್ ಸಮಯದಲ್ಲಿ ಜಿಲ್ಲೆಯ ಜನರು ಆಕ್ಸಿಜನ್ ಕೊರತೆಯಿಂದ ಪರಿತಪಿಸುತ್ತಿದ್ದಾಗ, ಆಕ್ಸಿಜನ್ ಒದಗಿಸಲಾಗದ ಬಿಜೆಪಿಗರು ಸೋಂಬೇರಿಗಳಲ್ಲಾ. ಜಿಲ್ಲೆಯಲ್ಲಿ ಅಕ್ರಮ ಜೂಜಿನಡ್ದೆ, ಮಟ್ಕಾ, ಅಕ್ರಮ ಮರಳು ಗಣಿಗಾರಿಕೆ ನಿಲ್ಲಿಸಲಾಗದ ಬಿಜೆಪಿಗರು ಸೋಂಬೇರಿಗಳಲ್ಲಾ. 2 ವರ್ಷದಿಂದ ಸತತವಾಗಿ ತೊಗರಿಗೆ ಸೂಕ್ತ ಬೆಂಬಲ ಬೆಲೆ ಕೊಡಿಸದ ಬಿಜೆಪಿಗರು ಸೋಂಬೇರಿಗಳಲ್ಲಾ. ಕಳೆದ ಎಂ ಪಿಚುನಾವಣೆಯ ಸಂದರ್ಭದಲ್ಲಿ ಕೋಲಿ, ಕಬ್ಬಲಿಗ ಸಮುದಾಯವನ್ನು ಎಸ್ ಟಿ ಪಟ್ಟಿಗೆ ಸೇರಿಸುವುದಾಗಿ ವಚನ ಕೊಟ್ಟು ಈಗ ಆ ವಿಷಯವನ್ನೇ ಮರೆತಿರುವ ಬಿಜೆಪಿಗರು ಸೋಂಬೇರಿಗಳಲ್ಲ ಎಂದು ಖರ್ಗೆ ಅವರು ಟೀಕಿಸಿದ್ದಾರೆ.
ಪುರಂದರದಾಸರ ವಚನ " ಆಚಾರವಿಲ್ಲದ ನಾಲಿಗೆ ನಿನ್ನ ನೀಚಗುಣವ ಬಿಡು ನಾಲಿಗೆ, ವಿಚಾರವಿಲ್ಲದೆ ಪರರ ದೂಷಿಪುದಕ್ಕೆ
ಚಾಚಿ ಕೊಂಡಿರುವಂಥ ನಾಲಿಗೆ" ಎನ್ನುವ ವಚನವನ್ನು ಉಲ್ಲೇಖಿಸುವ ಮೂಲಕ ಸಚಿವರ ವಿರುದ್ದ ಅಸಮಧಾನ ವ್ಯಕ್ತಪಡಿಸಿರುವ ಪ್ರಿಯಾಂಕ್ ಖರ್ಗೆ ಅವರು " ನಿಜಾಮರ ಆಳ್ವಿಕೆಯಲ್ಲಿ ಒಂದು ಮೂಲೆಯಲ್ಲಿದ್ದ ನಮ್ಮ ಭಾಗ ಅಭಿವೃದ್ಧಿಯನ್ನೇ ಕಾಣದೇ ಹಿಂದುಳಿದಿತ್ತು. ಆದರೆ ಬೆಂಗಳೂರೆಂಬ ಮಾಯಾನಗರಿಯಲ್ಲಿ ತಲೆ ಎತ್ತಿರುವ ಪ್ರತಿಯೊಂದು ಕಟ್ಟಡದ ಹಿಂದೆ ಕಲಬುರಗಿ ಜನರು ಶ್ರಮದ ಬೆವೆರಿದೆ ಎಂಬುದನ್ನ ಮರೆಯದಿರಿ, ಆಧುನಿಕತೆಯ ಸ್ಪರ್ಶ ಹೊಂದುವಲ್ಲಿ ನಮ್ಮ ಜನ ಹಿಂದಿರಬಹುದೇನೋ, ಆದರೆ ನಮ್ಮ ಜನ ಸೋಂಬೇರಿಗಳಂತೂ ಅಲ್ಲವೇ ಅಲ್ಲಾ. ನೀವು ಆಡಿದ ಮಾತನ್ನ ಹಿಂತೆಗೆದುಕೊಂಡು ಕೂಡಲೇ ಕಲಬುರಗಿ ಜಿಲ್ಲೆಯ ಜನತೆಗೆ ಕ್ಷಮೆಯಾಚಿಸಬೇಕೆಂದು ಈ ಮೂಲಕ ನಿಮ್ಮಲ್ಲಿ ಆಗ್ರಹಿಸುತ್ತೇನೆ" ಎಂದಿದ್ದಾರೆ.







