ಉದ್ಯೋಗದ ಹಕ್ಕು: ಡಿವೈಎಫ್‌ಐ ಅಧ್ಯಯನ ಶಿಬಿರ

ಕುಂದಾಪುರ, ಆ.24:ಕೇಂದ್ರ-ರಾಜ್ಯ ಸರಕಾರಗಳುಯುವಜನರಿಗೆ ಉದ್ಯೋಗ ಒದಗಿಸಲು ಮುಂದಾಗುವಂತೆ ಒತ್ತಾಯಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ಸಂಘಟನೆ ರಾಜ್ಯವ್ಯಾಪಿ ಹೋರಾಟಗಳನ್ನು ಸಂಘಟಿಸುತ್ತಿದೆ ಎಂದು ಡಿವೈಎಫ್ಐ ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.
ಡಿವೈಎಫ್‌ಐ ಕುಂದಾಪುರ ತಾಲೂಕು ಸಮಿತಿ ಆಶ್ರಯದಲ್ಲಿ ನಡೆದ ಉದ್ಯೋಗ ಸೃಷ್ಠಿಗಾಗಿ, ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆಗಾಗಿ ಕುಂದಾಪುರದ ಹೆಂಚು ಕಾರ್ಮಿಕರ ಭವನದಲ್ಲಿ ನಡೆದ ಅಧ್ಯಯನ ಶಿಬಿರವನ್ನು ಉಧ್ಘಾಟಿಸಿ ಅವರು ಮಾತನಾಡುತಿದ್ದರು.
ಉದ್ಯೋಗ ಎಂದರೆ ಒಂದು ಕುಟುಂಬ ತಮ್ಮ ಆರೋಗ್ಯ, ಶಿಕ್ಷಣ, ಆಹಾರ, ವಸತಿ ಮುಂತಾದ ಅಗತ್ಯ ಮೂಲಭೂತ ಸೌಕರ್ಯಗಳನ್ನು ಪಡೆಯಲು ಇರುವ ಸಂವಿಧಾನದ ಆಶಯವಾಗಿದ್ದು, ಇಂದಿನ ಸರಕಾರಗಳು ಇವುಗಳನ್ನು ನಿರಾಕರಿ ಸುತ್ತಿವೆ. ಜನಪ್ರತಿನಿಧಿಗಳು ಇಂತಹ ಆಶಯಗಳ ಬಗ್ಗೆ ಎಂದಿಗೂ ಮಾತಾಡುವುದಿಲ್ಲ ಎಂದವರು ನುಡಿದರು.
ಇಂದು ಶಿಕ್ಷಣ ಸಂಸ್ಥೆಗಳಿಂದ ಕೋಟ್ಯಾಂತರ ವಿದ್ಯಾರ್ಥಿಗಳು ಶಿಕ್ಷಣ ಮುಗಿಸಿ ಉದ್ಯೋಗಕ್ಕೆ ಅರ್ಹರಾಗಿ ಹೊರಗೆ ಬರುತ್ತಿದ್ದರೂ, ಅವರಿಗೆ ಇಂದು ಉದ್ಯೋಗ ಭದ್ರತೆಯೇ ಇಲ್ಲದಾಗಿದೆ.ಉಡುಪಿ ಜಿಲ್ಲೆಯಲ್ಲಿ ದೊರಕುವ ಪ್ರಾಕೃತಿಕ ಸಂಪನ್ಮೂಲಗಳಾದ ಬಾಕ್ಸೈಟ್ ಅದಿರು, ಮೀನುಗಾರಿಕೆ ಮೊದಲಾದವುಗಳನ್ನು ಬಳಸಿಕೊಂಡು ಸರಕಾರಿ ಕೈಗಾರಿಕೆಗಳನ್ನು ಸ್ಥಾಪಿಸಬೇಕು ಎಂದವರು ಸಲಹೆ ನೀಡಿದರು.
ಬ್ರಹ್ಮಾವರ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸಿದರೆಒಂದಿಷ್ಟು ಉದ್ಯೋಗ ಸಿಗುತ್ತದೆ. ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಸೇರಿದಂತೆ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಗಾಗಿ ಬೃಹತ್ ಚಳವಳಿಯನ್ನು ಕಟ್ಟಬೇಕಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಅಧ್ಯಯನ ತರಗತಿಯಲ್ಲಿ ಚಂದ್ರಶೇಖರ, ಸುರೇಶ್ ಕಲ್ಲಾಗರ, ಎಚ್. ನರಸಿಂಹ ಮಾತನಾಡಿದರು.ಅಧ್ಯಯನ ತರಗತಿಯನ್ನು ರಾಜೇಶ್ ವಡೇರ ಹೋಬಳಿ ನಡೆಸಿಕೊಟ್ಟರು. ಡಿವೈಎಫ್ಐ ಕಾರ್ಯದರ್ಶಿ ಗಣೇಶ್‌ದಾಸ್ ವಂದಿಸಿದರು.








