ವಿಶ್ವನಾಥ್ ಟ್ರಂಪ್, ಬೈಡನ್ ಅವರನ್ನೂ ಬಿಟ್ಟಿಲ್ಲ: ಸಂಸದ ಪ್ರತಾಪ್ ಸಿಂಹ ತಿರುಗೇಟು
''ನೀವು ಸತ್ಯಸಂಧರ ರೀತಿ ಮಾತನಾಡಬೇಡಿ''

ಮೈಸೂರು,ಆ.24: 'ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು ಟೀಕೆ ಮಾಡದ ವ್ಯಕ್ತಿಗಳೇ ಇಲ್ಲ. ಟ್ರಂಪ್, ಬೈಡನ್ ಅವರನ್ನೂ ಬಿಟ್ಟಿಲ್ಲ' ಎಂದು ಸಂಸದ ಪ್ರತಾಪಸಿಂಹ ತಿರುಗೇಟು ನೀಡಿದ್ದಾರೆ.
ಬೆಂಗಳೂರು-ಮೈಸೂರು ದಶಪಥ ರಸ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಎಚ್.ವಿಶ್ವನಾಥ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪ್ರತಾಪಸಿಂಹ, ದೇವೇಗೌಡರು, ಯಡಿಯೂರಪ್ಪ, ವಿಜಯೇಂದ್ರ, ಎಸ್.ಟಿ.ಸೋಮಶೇಖರ್ ಎಲ್ಲರನ್ನೂ ವಿಶ್ವನಾಥ್ ಬೈಯ್ದಿದ್ದು ಆಯ್ತು. ಸಿಎಂ ಬಸವರಾಜ್ ಬೊಮ್ಮಾಯಿ ಬಗ್ಗೆ ಮಾತನಾಡುವುದಕ್ಕೆ ಏನು ಸಿಕ್ಕಿಲ್ಲ. ಅದಕ್ಕಾಗಿ ಈ ಗ್ಯಾಪ್ಲ್ಲ ನನ್ನ ಬಗ್ಗೆ ಟೀಕೆ ಮಾಡುತ್ತಿದ್ದಾರೆ ಕುಟುಕಿದ್ದಾರೆ.
ಮೋದಿ ಅವರ ಸರ್ಕಾರ ಈ ಯೋಜನೆಗೆ ಹಣ ಬಿಡುಗಡೆ ಮಾಡಿ, ಕಾಮಗಾರಿಗೆ ಚಾಲನೆ ನೀಡಲಾಗಿತ್ತು. 8,666 ಕೋಟಿ ರೂ. ಪ್ರಾಜೆಕ್ಟ್ ನಲ್ಲಿ 8 ಪೈಸೆನಾದರೂ ವಿಶ್ವನಾಥ್ ಅವರು ಬಿಡುಗಡೆ ಮಾಡಿಸಿದ್ರಾ? ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿದ್ದಾರ? ಎಂದು ಪ್ರಶ್ನಿಸಿದ್ದಾರೆ.
ನಿತಿನ್ ಗಡ್ಕರಿ ನಮ್ಮ ಕೇಂದ್ರ ಸರ್ಕಾರದ ಮಂತ್ರಿ. ಮೋದಿ ಅವರ ಆಡಳಿತದಲ್ಲಿ ಶುರುವಾಗುವ ಪ್ರಾಜೆಕ್ಟ್ ಗಳು ಮೋದಿ ಸರ್ಕಾರಕ್ಕೆ ಸಲ್ಲಬೇಕು. ವಿಶ್ವನಾಥ್ ಅವರು ತಾವೇ ಈ ಯೋಜನೆ ತಂದಿದ್ದರೆ, ತಮ್ಮ ಚುನಾವಣೆ ವೇಳೆ ಯಾಕೆ ಹೇಳಿಲ್ಲ ಎಂದು ಕೇಳಿದ್ದಾರೆ.
ವಿಶ್ವನಾಥ್ ಅವರೇ, ಮಾಧ್ಯಮದ ಮುಂದೆ ಚರ್ಚೆ ಮಾಡೋಣ ಬನ್ನಿ. ಹಳೆ ಉಂಡುವಾಡಿ ಕುಡಿಯುವ ನೀರು ಯೋಜನೆಗೂ ವಿಶ್ವನಾಥ್ ಐದು ಪೈಸೆ ಕೊಡಿಸಿಲ್ಲ. ನೀವು ಸತ್ಯಸಂಧರ ರೀತಿ ಮಾತಾಡಬೇಡಿ ಎಂದು ವಾಗ್ದಾಳಿ ನಡೆಸಿದ್ದಾರೆ.
'ಮಾಜಿ ಸಚಿವ ಮಹದೇವಪ್ಪ ಅವರೇ, ನಿಮ್ಮ ಅವಧಿಯಲ್ಲಿ ಮಾಡಿದ ಒಂದು ರಸ್ತೆಯಾದರೂ ನೆಟ್ಟಗಿದಿಯಾ? ನಿಮಗೆ ದಶಪಥ ರಸ್ತೆಯ ಕ್ರೆಡಿಟ್ ಬೇಕಾ? ನೀವು ಹಿರಿಯರು, ಮಾರ್ಗದರ್ಶನ ಮಾಡಿ ಸರ್, ಬೀದಿ ಜಗಳಕ್ಕೆ ಇಳಿಯಬೇಡಿ' ಎಂದು ತಿಳಿಸಿದ್ದಾರೆ.
'ದಶಪಥ ರಸ್ತೆಯಲ್ಲಿ ಎಲ್ಲಿ ಅವೈಜ್ಞಾನಿಕ ಕಾಮಗಾರಿ ಆಗಿದೆ ಅಂತಾ ಸಂಸದೆ ಸುಮಲತಾ ತೋರಿಸಲಿ. ಇಲ್ಲ ಒಂದು ಕರೆ ಮಾಡಿ ಅಥವಾ ಮೆಸೇಜ್ ಮಾಡಿ ಸಾಕು. 24 ಗಂಟೆ ಒಳಗೆ ನಾನು ಸ್ಥಳದಲ್ಲಿ ಇರುತ್ತೇನೆ. ತಜ್ಞರನ್ನು ನಾನೇ ಕರೆದುಕೊಂಡು ಬರುತ್ತೇನೆ. ರಸ್ತೆ ಅವೈಜ್ಞಾನಿಕವಾಗಿದ್ದರೆ ಅದನ್ನು ನೀವು ಹೇಳಿದ ರೀತಿ ವೈಜ್ಞಾನಿಕವಾಗಿಯೇ ಸರಿಪಡಿಸುತ್ತೇವೆ. ಸುಮ್ಮನೆ ಅದು ಅವೈಜ್ಞಾನಿಕ ಎಂದು ಹೇಳುವುದರಲ್ಲಿ ಅರ್ಥವಿಲ್ಲ. ನಿಮಗೆ ಮಾಡಲು ಆಗದ ಕನಸುಗಳನ್ನು ನನಗೆ ಹೇಳಿ. ನಾನು ಮಾಡಿಕೊಡುತ್ತೇನೆ. ಕೇಂದ್ರದ ಯಾವ ಅಧಿಕಾರಿಯನ್ನು ಕರೆ ತರಬೇಕೆಂದು ಹೇಳಿ. ನಾನು ಕರೆದುಕೊಂಡು ಬರುತ್ತೇನೆ. ನಮ್ಮ ಸಾಹೇಬರು ಹೇಳಿರುವ ಕೆಲಸ ಎಂದು ಮಾಡುತ್ತೇನೆ' ಅಂತ ಸಂಸದೆ ಸುಮಲತಾ ವಿರುದ್ಧವೂ ಹರಿಹಾಯ್ದಿದ್ದಾರೆ.







