ಗೋಹತ್ಯೆ ನಿಷೇಧ ಕಾಯ್ದೆ: ಪೌಷ್ಟಿಕಾಹಾರಕ್ಕೆ ಪೆಟ್ಟು; ಡಾ.ಸಿಲ್ವಿಯಾ

ಬೆಂಗಳೂರು, ಆ.24: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಿಂದಾಗಿ ಪೌಷ್ಟಿಕಾಹಾರ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ಸಾರ್ವಜನಿಕ ಆರೋಗ್ಯ ತಜ್ಞೆ ಡಾ.ಸಿಲ್ವಿಯಾ ಕರಪಗಮ್ ಹೇಳಿದ್ದಾರೆ.
ಮಂಗಳವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆಹಾರ ನಮ್ಮ ಹಕ್ಕು(ಕರ್ನಾಟಕ) ಅಭಿಯಾನದಡಿ ಈ ಕಾಯ್ದೆಯಿಂದ ಉಂಟಾಗಿರುವ ಸಮಸ್ಯೆಗಳ ಕುರಿತು ಜನ ಜಾಗೃತಿ ಮೂಡಿಸಲಾಗುತ್ತಿದೆ. ಇನ್ನು, ಇದರ ಬಗ್ಗೆ ಭಾರೀ ಚರ್ಚಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕಾಯ್ದೆ ವಾಪಸ್ಸು ಪಡೆಯಲಿ ಎಂದರು.
ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020 ಜಾರಿ ಮಾಡುವ ಮೂಲಕ ಸಂವಿಧಾನದ 29(1)ನೇ ವಿಧಿಯ ಹಕ್ಕನ್ನು ಕಸಿದುಕೊಂಡಂತಾಗುತ್ತದೆ ಎಂದ ಅವರು, ಕಾಯ್ದೆ ಜಾರಿಯಿಂದ ರೈತರ ಆದಾಯದ ಮೇಲೆ ಬಹುದೊಡ್ಡ ಪರಿಣಾಮ ಬೀರಲಿದೆ ಮಾತ್ರವಲ್ಲದೆ ಆಹಾರ ಪದ್ಧತಿ ಮೇಲೂ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದಲಿತ ಮುಖಂಡ ಆರ್.ಮೋಹನ್ ರಾಜ್ ಮಾತನಾಡಿ, ರಾಜ್ಯ ಸರಕಾರ ಜಾರಿಗೆ ತಂದಿರುವ ಗೋಹತ್ಯೆ ನಿಷೇಧ ಕಾಯ್ದೆ ಕಠೋರ ಮತ್ತು ಅವೈಜ್ಞಾನಿಕ ಮಾತ್ರವಲ್ಲ, ಸಂಪೂರ್ಣ ರೈತ ವಿರೋಧಿಯಾಗಿದೆ. ಈ ಕಾಯ್ದೆಗೆ ಮತೀಯ ಭಾವನೆಗಳನ್ನು ಕೆರಳಿಸಿ ರಾಜಕೀಯ ಲಾಭ ಪಡೆಯುವ ದುರುದ್ದೇಶ ಇದೆಯೇ ಹೊರತು ಗೋವಿನ ಬಗ್ಗೆ ಭಕ್ತಿಯಾಗಲಿ, ಕಾಳಜಿಯಾಗಲಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಾನುವಾರುಗಳ ಬಗ್ಗೆ ಬಿಜೆಪಿ ಸರಕಾರ ಪ್ರಾಮಾಣಿಕವಾದ ಕಾಳಜಿ ಹೊಂದಿದ್ದರೆ ಜಾನುವಾರು ಸಂಬಂಧಿ ಆರ್ಥಿಕ ಮತ್ತು ಸಾಮಾಜಿಕ ಅಧ್ಯಯನವನ್ನು ತಜ್ಞರಿಂದ ನಡೆಸಿ, ಅದರ ವರದಿ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿ ನಂತರ ಗೋಹತ್ಯೆ ನಿಷೇಧ ಕಾಯ್ದೆಯನ್ನು ರೂಪಿಸಬೇಕು ಎಂದು ಹೇಳಿದರು.
ಗೋವುಗಳ ಬಗ್ಗೆ ಬಿಜೆಪಿಗೆ ಅಷ್ಟೊಂದು ಭಕ್ತಿ ಮತ್ತು ಕಾಳಜಿ ಹೊಂದಿದ್ದರೆ ಗೋವಾ, ಕೇರಳ ಮತ್ತು ಈಶಾನ್ಯ ರಾಜ್ಯ ಸೇರಿ ಇಡೀ ದೇಶಕ್ಕೆ ಅನ್ವಯವಾಗುವಂತಹ ಒಂದು ಕಾನೂನನ್ನು ಜಾರಿಗೆ ತನ್ನಿ, ಇದರ ಜೊತೆಗೆ ಗೋಮಾಂಸ ರಫ್ತು ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಆಹಾರ ನಮ್ಮ ಹಕ್ಕು ಸಂಚಾಲಕ ಶುಹೆಬ್ ಉರ್ ರೆಹ್ಮಾನ್ ಖುರೇಶ್ ಸೇರಿದಂತೆ ಪ್ರಮುಖರಿದ್ದರು.







