ಕಾನೂನು ಹೋರಾಟ ನಡೆಸುವ ಬದಲು ತಾಯಿಯ ಹೃದಯ ಗೆಲ್ಲು: ಹೈಕೋರ್ಟ್‍ನಿಂದ ಮಗಳಿಗೆ ಬುದ್ಧಿಮಾತು

ಬೆಂಗಳೂರು, ಆ.24: ತಾಯಿ ನೀಡಿದ್ದ ನಿವೇಶನದ ದಾನಪತ್ರವನ್ನು ರದ್ದುಪಡಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್, ತಾಯಿಯ ವಿರುದ್ಧ ಕಾನೂನು ಹೋರಾಟ ನಡೆಸುವ ಬದಲು ತಾಯಿಯ ಹೃದಯ ಗೆಲ್ಲುವಂತೆ ಮಗಳಿಗೆ ಬುದ್ಧಿಮಾತು ಹೇಳಿದೆ. ಜತೆಗೆ ಈ ವಿಚಾರದಲ್ಲಿ ಅರ್ಜಿದಾರರ ಪರವಾಗಿ ನಿಲ್ಲಲಾಗದು ಎಂದು ಕೂಡ ಅಭಿಪ್ರಾಯಪಟ್ಟಿದೆ.
ನಿವೇಶನದ ದಾನಪತ್ರವನ್ನು ರದ್ದುಪಡಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಮಕ್ಕಳು ತಾಯಿಯನ್ನು ಕೆಲವು ಕಾರಣಗಳಿಗೆ ವಿರೋಧಿಸಬಹುದು. ಆದರೆ, ಯಾವ ತಾಯಿಯೂ ಮಕ್ಕಳನ್ನು ವಿರೋಧಿಸುವುದಿಲ್ಲ. ಮೊದಲು ತಾಯಿಯ ಪಾದಕ್ಕೆ ನಮಸ್ಕರಿಸಿ ಆಕೆಯ ಮುಖ ನೋಡು. ತಾಯಿಯೇ ನಿವೇಶನವನ್ನು ಮತ್ತೆ ನಿನಗೆ ದಾನ ನೀಡಲು ಮನಸ್ಸು ಮಾಡಬಹುದು ಎಂದು ತಾಯಿಯ ವಿರುದ್ಧ ಕಾನೂನು ಹೋರಾಟ ನಡೆಸುತ್ತಿರುವ ಮಗಳಿಗೆ ನ್ಯಾಯಪೀಠವು ಬುದ್ಧಿಮಾತು ಹೇಳಿದೆ.
2015ರಲ್ಲಿ ಜಯಮ್ಮ ಎಂಬ ಮಹಿಳೆ ತನ್ನ ಮಗಳಾದ ಶಾಂತಮ್ಮ ಎಂಬುವವರಿಗೆ ಕುಮಾರಸ್ವಾಮಿ ಬಡಾವಣೆಯ 600 ಅಡಿ ಚದರಡಿ ನಿವೇಶನವನ್ನು ದಾನಪತ್ರದ ಮೂಲಕ ನೀಡಿದ್ದರು. ಆದರೆ ನಿವೇಶನ ಪಡೆದುಕೊಂಡ ನಂತರ ನನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಈ ಮೊದಲು ಚೆನ್ನಾಗಿ ನೋಡಿಕೊಳ್ಳುವುದಾಗಿ ನೀಡಿದ್ದ ಭರವಸೆಯನ್ನು ಹುಸಿಗೊಳಿಸಿದ್ದಾಳೆ ಎಂದು ಜಯಮ್ಮ ದೂರಿದ್ದರು.
ತಮ್ಮ ನೋವಿಗೆ ಪರಿಹಾರ ಒದಗಿಸುವಂತೆ ಬೆಂಗಳೂರು ದಕ್ಷಿಣ ಸಹಾಯಕ ಆಯುಕ್ತರು ಅಧ್ಯಕ್ಷರಾಗಿರುವ ಹಿರಿಯ ನಾಗರಿಕರ ಕಲ್ಯಾಣ ನ್ಯಾಯಮಂಡಳಿ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾಯಮಂಡಳಿ 2018ರ ನ.28ರಂದು ತಾಯಿ ಮಗಳಿಗೆ ನೀಡಿದ್ದ ದಾನಪತ್ರವನ್ನು ರದ್ದುಪಡಿಸಿತ್ತು. ಇದನ್ನು ಪ್ರಶ್ನಿಸಿ ಮಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.
ತಾಯಿಗೆ ಪ್ರತಿ ತಿಂಗಳು 30 ಸಾವಿರಕ್ಕೂ ಹೆಚ್ಚು ಬಾಡಿಗೆ ಬರುತ್ತಿದೆ. ಅರಿಶಿನ ಕುಂಕುಮಕ್ಕೆಂದು ಈ ಆಸ್ತಿಯನ್ನು ದಾನಪತ್ರವಾಗಿ ತಾಯಿ ನನಗೆ ನೀಡಿದ್ದಾರೆ. ದಾನಕ್ಕೆ ಪ್ರತಿಯಾಗಿ ಆಕೆಗೆ ಸೌಕರ್ಯ ಕಲ್ಪಿಸಬೇಕೆಂದು ದಾನಪತ್ರದಲ್ಲಿ ಷರತ್ತು ವಿಧಿಸಿಲ್ಲ. ಈ ಬಗ್ಗೆ ವಿವರವಾಗಿ ಆಕ್ಷೇಪಣೆ ಸಲ್ಲಿಸಿದ್ದರೂ ಹಿರಿಯ ನಾಗರಿಕರ ಕಲ್ಯಾಣ ನ್ಯಾಯಮಂಡಳಿ ಪರಿಗಣಿಸಿಲ್ಲ. ಹೀಗಾಗಿ ನ್ಯಾಯಮಂಡಳಿ ಆದೇಶ ರದ್ದುಪಡಿಸಬೇಕು.
ದಾನಪತ್ರವನ್ನು ಊರ್ಜಿತಗೊಳಿಸಬೇಕು ಎಂದು ಮನವಿ ಮಾಡುತ್ತೇನೆ ಎಂದು ಮಗಳು ಶಾಂತಮ್ಮ ಮೇಲ್ಮನವಿಯಲ್ಲಿ ಉಲ್ಲೇಖಿಸಿದ್ದರು.
ನನಗೆ ಗಂಡು ಮಕ್ಕಳಿಲ್ಲ. ಅವಿದ್ಯಾವಂತೆ, ಇದನ್ನೇ ದುರುಪಯೋಗಪಡಿಸಿಕೊಂಡು ಮಗಳು ನನ್ನ ಆಸ್ತಿಯನ್ನು ಮೋಸದಿಂದ ದಾನಪತ್ರದ ಮೂಲಕ ಬರೆಸಿಕೊಂಡಿದ್ದಾಳೆ. ಮಗಳು ನಿವೇಶನದಲ್ಲಿರುವ ಮನೆಯಲ್ಲಿ ವಾಸವಿಲ್ಲ, ಬಾಡಿಗೆ ನೀಡಿ ಅದನ್ನು ಬಳಸಿಕೊಳ್ಳುತ್ತಿದ್ದಾಳೆ. ಮೋಸದಿಂದ ದಾನಪತ್ರ ಬರೆಸಿಕೊಂಡು ನಂತರ ನನ್ನನ್ನು ನಿರ್ಲಕ್ಷಿಸಿದ್ದಾರೆ. ಹೀಗಾಗಿ, ದಾನಪತ್ರ ರದ್ದುಪಡಿಸಬೇಕು ಎಂದು ತಾಯಿ ಜಯಮ್ಮ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠಕ್ಕೆ ಮನವಿ ಮಾಡಿದ್ದರು.
ತಾಯಿ ವಾದಕ್ಕೆ ಹೈಕೋರ್ಟ್ ಏಕಸದಸ್ಯ ಪೀಠ ಮನ್ನಣೆ ನೀಡಿತ್ತು. ಹೈಕೋರ್ಟ್ ಏಕಸದಸ್ಯ ಪೀಠ ಮಗಳ ವಾದ ತಳ್ಳಿಹಾಕಿದ್ದಲ್ಲದೇ ದಾನಪತ್ರ ರದ್ದುಪಡಿಸಿದ ನ್ಯಾಯಮಂಡಳಿ ಆದೇಶವನ್ನು ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಮಗಳು ಹೈಕೋರ್ಟ್ ವಿಭಾಗೀಯ ಪೀಠದ ಮೆಟ್ಟಿಲೇರಿದ್ದಳು. ಆಗ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ ತಾಯಿಯೇ ಪ್ರತ್ಯಕ್ಷ ದೇವರು, ಆಸ್ತಿಗಾಗಿ ಹೋರಾಟ ಮಾಡುವ ಬದಲು ತಾಯಿಯ ಹೃದಯ ಗೆಲ್ಲುವಂತೆ ಮಗಳಿಗೆ ಬುದ್ಧಿವಾದ ಹೇಳಿದೆ.







