ಕೋವಿಡ್ ವಾರಿಯರ್ಸ್ ತರಬೇತಿಗೆ ಉಡುಪಿ ಮಿಷನ್ ಆಸ್ಪತ್ರೆ ಆಯ್ಕೆ

ಉಡುಪಿ, ಆ.24: ಉಡುಪಿಯ ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆ ಯನ್ನು ಸಂಭಾವ್ಯ ಮೂರನೇ ಹಂತದ ಕೋವಿಡ್ ಸೋಂಕುಗಳನ್ನು (ಮೂರನೇ ಅಲೆ) ಎದುರಿಸಲು ಮುಂಚೂಣಿಯ ಕೋಡ್ ಯೋಧರಿಗೆ ತರಬೇತಿ ನೀಡುವ ಸಂಸ್ಥೆಯಾಗಿ ಆಯ್ಕೆ ಮಾಡಲಾಗಿದೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ.ಸುಶಿಲ್ ಜತನ್ನ ತಿಳಿಸಿದ್ದಾರೆ.
ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆಯು ಉಡುಪಿಯ ಜನರಿಗೆ ಈ ತರಬೇತಿಯನ್ನು ನೀಡಲು ಆಯ್ಕೆಯಾದ ಏಕೈಕ ಸಂಸ್ಥೆಯಾಗಿದೆ. ತರಬೇತಿಯನ್ನು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಮಂಡಳಿ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆಯ ಸಚಿವಾಲಯವು ಭಾರತೀಯ ಆರೋಗ್ಯ ಸೇವೆ ಪೂರೈಕೆ ದಾರರ ಸಂಘದ(ಎಎಚ್‌ಪಿಐ) ಸಹಯೋಗದೊಂದಿಗೆ ಪ್ರಾಯೋಜಿಸಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದಾದ್ಯಂತ ನುರಿತ ಕೋವಿಡ್ ಮುಂಚೂಣಿ ಸೇವಾರ್ಥಿಗಳ ಕೊರತೆಯನ್ನು ನೀಗಿಸಲು ಕಳೆದ ಜೂನ್ ತಿಂಗಳಲ್ಲಿ ಈ ವಿಶೇಷ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು.
ಈ ತರಬೇತಿಗೆ ಗುರುತಿಸಲಾದ ಹೊಸ ಔದ್ಯೋಗಿಕ ಬೆಂಬಲ ಮತ್ತು ಸಹಕಾರ ನೀಡುವ ಪಾತ್ರಗಳಲ್ಲಿ ಮೂಲಭೂತ ಆರೈಕೆ, ತುರ್ತು ಆರೈಕೆ, ಉನ್ನತ ಆರೈಕೆ, ಸ್ಯಾಂಪಲ್ ಸಂಗ್ರಹ, ಮನೆ ಆರೈಕೆ ಮತ್ತು ವೈದ್ಯಕೀಯ ಸಲಕರಣೆಗಳ ಉಪಯೋಗಿಸುವಿಕೆ ಸೇರಿವೆ. ತರಬೇತಿಯು ತರಗತಿ ಕಲಿಕೆ ಮತ್ತು ವೈದ್ಯಕೀಯ ಮತ್ತು ಶುಶ್ರೂಷಾ ಸಿಬ್ಬಂದಿಯ ಮೇಲ್ವಿಚಾರಣೆಯಲ್ಲಿ ವಿವಿಧ ಪ್ರಾಯೋಗಿಕ ತರಬೇತಿ ನೀಡುವುದನ್ನು ಒಳಗೊಂಡಿರುತ್ತದೆ.
ಈ ಕಾರ್ಯಕ್ರಮ ಕೋವಿಡ್-19ರ ವಿರುದ್ಧದ ಹೋರಾಟದಲ್ಲಿ ವಿವಿಧ ರಾಜ್ಯಗಳು ಮತ್ತು ಜಿಲ್ಲಾಡಳಿತಗಳನ್ನು ಸಬಲೀಕರಿಸಲಿದೆ. ಇದು ವೈದ್ಯರು ಮತ್ತು ದಾದಿಯರ ಅಧಿಕ ಕೆಲಸದ ಹೊರೆ ಕಡಿಮೆ ಮಾಡಲು ಸಹಾಯ ವಾಗುವುದಾದರೂ ಯಾವಾಗಲೂ ಅವರ ಮೇಲ್ವಿಚಾರಣೆಯಲ್ಲಿರಲಿದೆ ಎಂದು ಡಾ.ಸುಶಿಲ್ ಜತ್ತನ್ನ ತಿಳಿಸಿದ್ದಾರೆ.
ತರಬೇತಿಯ ವೆಚ್ಚವನ್ನು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಮಂಡಳಿ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ (ಎಂಎಸ್‌ಡಿಇ) ಭರಿಸಲಿವೆ. ಮುಂಚೂಣಿ ಕೋವಿಡ್ ಯೋಧರಿಗೆ ತರಬೇತಿ ನೀಡಲು ಲೊಂಬಾರ್ಡ್ ಸ್ಮಾರಕ ಆಸ್ಪತ್ರೆಯನ್ನು ಆಯ್ಕೆ ಮಾಡಿರುವುದು ಸಂಸ್ಥೆಗೆ ದೊರೆತ ಗೌರವವಾಗಿದೆ ಹಾಗೂ ಇದು ಲೊಂಬಾರ್ಡ್ ಸ್ಮಾರಕ ಆಸ್ಪತ್ರೆಯನ್ನು ಕೋವಿಡ್ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಅವಕಾಶ ನೀಡುತ್ತದೆ ಎಂದು ಡಾ.ಸುಶಿಲ್ ಜತನ್ನಾ ಹೇಳಿದ್ದಾರೆ.
ತರಬೇತಿ ಕಾರ್ಯಕ್ರಮವನ್ನು ಉಡುಪಿಯ ಲೊಂಬಾರ್ಡ್ ಕಾಲೇಜ್ ಆಫ್ ನಸಿರ್ಂಗ್‌ನ ಡಾ.ಸುಜಾ ಕರ್ಕಡ ಮತ್ತು ವೀಣಾ ಮೆನೆಜಸ್ ಅವರ ನೇತೃತ್ವದಲ್ಲಿ ನಡೆಸಲಾಗುವುದು. ಲೊಂಬಾರ್ಡ್ ಕಾಲೇಜ್ ಆಫ್ ನಸಿರ್ಂಗ್ ಉಡುಪಿಯ ಪ್ರತಿಷ್ಠಿತ ನಸಿರ್ಂಗ್ ಕಾಲೇಜುಗಳಲ್ಲಿ ಒಂದಾಗಿದ್ದು, ಲೊಂಬಾರ್ಡ್ ಸ್ಮಾರಕ ಆಸ್ಪತ್ರೆಯ ನಿರ್ವಹಣೆಯಲ್ಲಿರುವ ಸಂಸ್ಥೆಯಾಗಿದೆ.







