ಕನ್ನಡದಲ್ಲಿ ಜಾತಿ, ಮೌಢ್ಯತೆಯನ್ನು ಇಲ್ಲವಾಗಿಸುವ ಸಾಹಿತ್ಯ ಮೂಡಲಿ: ಎಚ್.ಟಿ.ಪೋತೆ
ಕಲಬುರಗಿ, ಆ.24: ಜಾತಿ ವ್ಯವಸ್ಥೆಯಿಂದ ಮತ್ತು ಮೌಢ್ಯತೆಯಿಂದ ದೂರಾಗಿಸುವ ಗಟ್ಟಿ ಸಾಹಿತ್ಯ ನಮ್ಮಲ್ಲಿ ಬೇಕಾಗಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಎಚ್.ಟಿ.ಪೋತೆ ಅಭಿಪ್ರಾಯಿಸಿದ್ದಾರೆ.
ನಗರದ ಕನ್ನಡ ಸಾಹಿತ್ಯ ಪರಿಷತ್‍ನ ಸುವರ್ಣ ಭವನದಲ್ಲಿ ಕಡಗಂಚಿಯ ಅಮರ್ಜಾ ಪ್ರಕಾಶನ ವತಿಯಿಂದ ಆಯೋಜಿಸಿದ ಸಮಾರಂಭದಲ್ಲಿ ಮೂರು ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಯಾವುದೇ ತರಹದ ಸಾಹಿತ್ಯ ಸಮಾಜ ಹಿತ ಬಯಸುವಂತಿರಬೇಕು. ಜೀವನದ ಕಷ್ಟ ಸುಖಗಳು ಹಾಗೂ ಜನ ಮಿಡಿತದ ಕಾವ್ಯಗಳು ಓದುಗರ ಹೃದಯ ತಟ್ಟಬೇಕೆಂದು ತಿಳಿಸಿದ್ದಾರೆ.
ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಅಧಿಕಾರಿ ಡಾ.ಸದಾನಂದ ಪೆರ್ಲ ಮಾತನಾಡಿ, ಸಾಹಿತ್ಯ ಯಾವತ್ತಿಗೂ ಜನ ಸಾಮಾನ್ಯರ ಧ್ವನಿಯಾಗಿ ನಿಲ್ಲಬೇಕು. ಬರಹಗಾರರು ಅಧ್ಯಯನಶೀಲರಾಗಿ ಕಾವ್ಯ ಓದುವ ಸಂಸ್ಕೃತಿ ಅಳವಡಿಸಿ ಕೊಳ್ಳಬೇಕೆಂದು ಆಶಿಸಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ಮಾತನಾಡಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಈ ಭಾಗದ ಲೇಖಕರ ಕೃತಿಗಳ ಖರೀದಿಗಾಗಿ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಈ ಹಿಂದೆಯೂ ಇಂತಹ ಪುಸ್ತಕ ಖರೀದಿ ಕಾರ್ಯವಿತ್ತು. ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಈ ಕುರಿತು ಮಂಡಳಿಯ ಅಧ್ಯಕ್ಷರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಶಿಕ್ಷಕ ಧರ್ಮಣ್ಣ ಎಚ್ ಧನ್ನಿ ಅವರ `ಮೌನ ಮಾತನಾಡಿದಾಗ’, ಮಹಾಂತೇಶ.ಎನ್ ಪಾಟೀಲರವರ ‘ಜ್ಞಾನ ದೀವಿಗೆ’ ಹಾಗೂ ಶೈಲಾ ಹಿಟ್ನಳ್ಳಿ ಅವರ ‘ಕಾಡತಾವ ನೆನಪ’ ಎಂಬ ಕವನ ಸಂಕಲನಗಳನ್ನು ಬಿಡುಗಡೆಗೊಳಿಸಲಾಯಿತು. ಹಿರಿಯ ಸಾಹಿತಿ ಎ.ಕೆ.ರಾಮೇಶ್ವರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲ ಶ್ರೀಶೈಲ ನಾಗರಾಳ ಅವರು ಕೃತಿಗಳ ಪರಿಚಯ ಮಾಡಿ ಕೊಟ್ಟರು. ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ಉಪಸ್ಥಿತರಿದ್ದರು.







