ಸುಪ್ರೀಂ ಕೋರ್ಟ್ ನ ಹೊರಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಯುವತಿ ಸಾವು

ಹೊಸದಿಲ್ಲಿ, ಅ. 23: ಸುಪ್ರೀಂ ಕೋರ್ಟ್ ನ ಹೊರಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿ ಗಂಭೀರ ಗಾಯಗೊಂಡಿದ್ದ ಯುವತಿ ಮೃತಪಟ್ಟಿದ್ದಾಳೆ. ಆಕೆಯ ಗೆಳೆಯ ಆಗಸ್ಟ್ 21ರಂದು ಸಾವನ್ನಪ್ಪಿದ್ದ. ಯುವತಿ ಹಾಗೂ ಆಕೆಯ ಗೆಳೆಯ ಆಗಸ್ಟ್ 16ರಂದು ಸುಪ್ರೀಂ ಕೋರ್ಟ್ ಹೊರಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಸುಪ್ರೀಂ ಕೋರ್ಟ್ ಹೊರಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸುವ ಮುನ್ನ ಅವರಿಬ್ಬರೂ ಫೇಸ್ಬುಕ್ ಲೈವ್ ಮಾಡಿದ್ದರು. ಪೇಸ್ಬುಕ್ ಲೈವ್ ನಲ್ಲಿ ಯುವತಿ ಹಾಗೂ ಆಕೆಯ ಗೆಳೆಯ ಎಸ್ಎಸ್ಪಿ ಅಮಿತ್ ಪಾಠಕ್, ಸಿಒ ಅಮರೇಶ್ ಸಿಂಗ್, ಇನ್ಸ್ಪೆಕ್ಟರ್ ಸಂಜಯ್ ರೈ, ಅವರ ಪುತ್ರ ವಿವೇಕ್ ರಾಯ್ ಹಾಗೂ ಮಾಜಿ ಐಜಿ ಅಮಿತಾಬ್ ಠಾಕೂರ್ ವಿರುದ್ಧ ಆರೋಪ ಮಾಡಿದ್ದರು.
ಉತ್ತರಪ್ರದೇಶದ ಗಾಝಿಪುರದ ನಿವಾಸಿಯಾಗಿರುವ ಯುವತಿಯ ಮೇಲೆ 2019ರಲ್ಲಿ ಬಹುಜನ ಸಮಾಜ ಪಕ್ಷದ ಸಂಸದ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು. ಅನಂತರ ಸಂಸದರನ್ನು ಬಂಧಿಸಲಾಗಿತ್ತು. ಅವರು ಅತ್ಯಾಚಾರ ಪ್ರಕರಣದ ಅಡಿಯಲ್ಲಿ ಕಳೆದ 2 ವರ್ಷಗಳಿಂದ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿದ ಯುವತಿಯನ್ನು ಸುಪ್ರೀಂ ಕೋರ್ಟ್ ಆವರಣದಲ್ಲಿದ್ದ ಪೊಲೀಸರ ತಂಡ ಬ್ಲಾಂಕೆಟ್ ಹೊದೆಸಿ ರಕ್ಷಿಸಿತ್ತು. ಆಕೆಯನ್ನು ಚಿಕಿತ್ಸೆಗೆ ರಾಮ ಮನೋಹರ ಲೋಹಿಯಾ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿತ್ತು ಎಂದು ಹೊಸದಿಲ್ಲಿಯ ಉಪ ಆಯುಕ್ತ ದೀಪಕ್ ಯಾದವ್ ತಿಳಿಸಿದ್ದಾರೆ.
ಆತ್ಮಹತ್ಯೆಯ ಖಚಿತ ಕಾರಣಗಳ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ, ಆರೋಪಿ ನಕಲಿ ಪ್ರಕರಣ ದಾಖಲಿಸಿರುವುದರಿಂದ ಭೀತಳಾಗಿ ಯುವತಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ ಎಂದು ಪೊಲೀಸರು ಶಂಕಿಸಿದ್ದಾರೆ.
ಫೇಸ್ಬುಕ್ ಲೈವ್ನಲ್ಲಿ ಯುವತಿ, ಉತ್ತರಪ್ರದೇಶದ ಸ್ಥಳೀಯ ನ್ಯಾಯಾಲಯ ತನಗೆ ಜಾಮೀನು ರಹಿತ ಬಂಧನಾದೇಶ ಹೊರಡಿಸಿದೆ. ನ್ಯಾಯಾಲಯದ ಮುಂದೆ ಹಾಜರಾಗಲು ತಿಳಿಸಿದೆ ಎಂದು ಹೇಳಿದ್ದಳು.







