ಅಫ್ಘಾನಿಸ್ತಾನದಲ್ಲಿದ್ದ 800ಕ್ಕೂ ಅಧಿಕ ಮಂದಿಯ ತೆರವು
ಹೊಸದಿಲ್ಲಿ, ಆ.24: ಕಳೆದ ವಾರ ತಾಲಿಬಾನ್ ಕ್ಷಿಪ್ರವಾಗಿ ಅಧಿಕಾರವನ್ನು ವಶಪಡಿಸಿಕೊಂಡ ಬಳಿಕ ಅಫ್ಘಾನಿಸ್ತಾನದಲ್ಲಿರುವ ತನ್ನ ಪೌರರನ್ನು ಹಾಗೂ ಕೆಲವು ಅಫ್ಘಾನ್ ಪ್ರಜೆಗಳನ್ನು ತೆರವುಗೊಳಿಸುವ ಭಾರತದ ಸಂಕೀರ್ಣವಾದ ಕಾರ್ಯಾಚರಣೆಗೆ ‘ಆಪರೇಶನ್ ದೇವಿಶಕ್ತಿ’ ಎಂದು ಹೆಸರಿಡಲಾಗಿದೆ. ಆಪರೇಶನ್ ದೇವಿಶಕ್ತಿ ಮೂಲಕ ಈವರೆಗೆ ಭಾರತವು 800ಕ್ಕೂ ಅಧಿಕ ಮಂದಿಯನ್ನು ಅಫ್ಘಾನಿಸ್ತಾನದಿಂದ ತೆರವುಗೊಳಿಸಿದೆ.
ಅಫ್ಘಾನ್ನಿಂದ ತೆರವುಗೊಳಿಸಲ್ಪಟ್ಟ 78 ಮಂದಿಯ ತಂಡವೊಂದು ದಿಲ್ಲಿಗೆ ಆಗಮಿಸಿರುವ ಕುರಿತಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಮಂಗಳವಾರ ಮಾಡಿದ ಟ್ವೀಟ್ ನಲ್ಲಿ ಕಾರ್ಯಾಚರಣೆಯ ಹೆಸರನ್ನು ಉಲ್ಲೇಖಿಸಿದ್ದರು. ಇದರೊಂದಿಗೆ ಕಾರ್ಯಾಚರಣೆಯ ಹೆಸರು ಬೆಳಕಿಗೆ ಬಂದಿದೆ.
‘‘ಆಪರೇಶನ್ ದೇವಿಶಕ್ತಿ ಮುಂದುವರಿಯಲಿದೆ. ತೆರುವುಗೊಳಿಸಲಾದ 78 ಮಂದಿ ದುಶಾನಬೆ ಮೂಲಕವಾಗಿ ದಿಲ್ಲಿಗೆ ಆಗಮಿಸಿದ್ದಾರೆ. ಭಾರತೀಯ ವಾಯುಪಡೆ, ಏರ್ ಇಂಡಿಯಾ ಹಾಗೂ ವಿದೇಶಾಂಗ ಸಚಿವಾಲಯ ತಂಡದ ದಣಿವರಿಯದ ಪ್ರಯತ್ನಗಳಿಗಾಗಿ ನಮನಗಳು’’ ಎಂದು ಜೈಶಂಕರ್ ಟ್ವೀಟಿಸಿದ್ದಾರೆ.
ತಮ್ಮ ಪ್ರಜೆಗಳನ್ನು ರಕ್ಷಿಸಲು ವಿವಿಧ ರಾಷ್ಟ್ರಗಳು ಪೇಚಾಡುತ್ತಿರುವಂತೆಯೇ ಮತ್ತು ಕಾಬೂಲ್ನಲ್ಲಿ ಭದ್ರತಾ ಪರಿಸ್ಥಿತಿ ಹದಗೆಡುತ್ತಿರುವ ನಡುವೆಯೇ ಭಾರತವು ಈವರೆಗೆ 800ಕ್ಕೂ ಅಧಿಕ ಮಂದಿಯನ್ನು ಅಫ್ಘಾನ್ನಿಂದ ತೆರವುಗೊಳಿಸಿದೆ. ತಾಲಿಬಾನ್ ನ ಪ್ರತೀಕಾರ ದಾಳಿಯ ಭೀತಿಯಿಂದ ದೇಶ ಬಿಟ್ಟು ತೊರೆಯಲು, ಕಳೆದ ಒಂದು ವಾರದಿಂದ ಸಾವಿರಾರು ಅಫ್ಘನ್ನರು ಹಾಗೂ ವಿದೇಶಿ ಪ್ರಜೆಗಳು ಕಾಬೂಲ್ ವಿಮಾನನಿಲ್ದಾಣದಲ್ಲಿ ಜಮಾಯಿಸಿದ್ದಾರೆ.
ತಾಲಿಬಾನ್ ಅಫ್ಘಾನ್ ರಾಜಧಾನಿ ಕಾಬೂಲ್ ಅನ್ನು ವಶಪಡಿಸಿಕೊಂಡ ಮರುದಿನವೇ ಭಾತವು 40 ಮಂದಿ ಭಾರತೀಯರನ್ನು ಆಗಸ್ಟ್ 16ರಂದು ದಿಲ್ಲಿಗೆ ಏರ್ಲಿಫ್ಟ್ ಮಾಡುವ ಮೂಲಕ ಭಾರತವು ಈ ಜಟಿಲದ ತೆರವು ಕಾರ್ಯಾಚರಣೆಯನ್ನು ಆರಂಭಿಸಿತ್ತು.
ಭಾರತವು ತನ್ನ 25 ಮಂದಿ ಪ್ರಜೆಗಳು, ಕೆಲವು ಅಫ್ಘನ್ ಸಿಖ್ಖರು ಹಾಗೂ ಹಿಂದೂಗಳನ್ನು ಕಾಬೂಲ್ನಿಂದ ತೆರವುಗೊಳಿಸಿ ತಜಿಕಿಸ್ತಾನದ ರಾಜಧಾನಿ ದುಶಾನಬೆಗೆ ಸೋಮವಾರ ಕರೆತಂದಿತ್ತು. ಅಲ್ಲಿಂದ ಅವರನ್ನು ಮಂಗಳವಾರ ಹೊಸದಿಲ್ಲಿಗೆ ಕರೆತರಲಾಗಿದೆ.







