ಪಠ್ಯಪುಸ್ತಕ ವಿತರಿಸದೆ ರಾಜ್ಯದಲ್ಲಿ ಶಾಲೆ ಆರಂಭ: ಹೈಕೋರ್ಟ್ ಅಸಮಾಧಾನ

ಬೆಂಗಳೂರು, ಆ.24: ಪಠ್ಯಪುಸ್ತಕ ವಿತರಿಸದೇ 9 ಹಾಗೂ 10ನೆ ತರಗತಿ ಮಕ್ಕಳಿಗೆ ಭೌತಿಕ ತರಗತಿಗಳನ್ನು ಆರಂಭ ಮಾಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಈ ಕುರಿತಂತೆ ಆ.30ರೊಳಗೆ ವಿವರಣೆ ನೀಡುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.
ನಗರದ ವಕೀಲರಾದ ಎ.ಎ. ಸಂಜೀವ್ ನರೈನ್ ಹಾಗೂ ಇತರರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಬಿ.ವಿ. ನಾಗರತ್ನ ನೇತೃತ್ವದ ವಿಭಾಗೀಯ ನ್ಯಾಯಪೀಠ, ಈ ನಿರ್ದೇಶನ ನೀಡಿದೆ.
ಪಠ್ಯ ಪುಸ್ತಕಗಳನ್ನು ಒದಗಿಸಲು ಏಕೆ ಪೂರ್ವ ಸಿದ್ದತೆ ಕೈಗೊಂಡಿಲ್ಲ, ಪುಸ್ತಕವಿಲ್ಲದೇ ಮಕ್ಕಳಿಗೆ ಶಾಲೆ ಆರಂಭಿಸಿರುವುದು ಅರ್ಥಹೀನವಾಗಿದೆ, ಸರಕಾರ ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು. 9, 10 ನೆ ತರಗತಿ ಮಕ್ಕಳಿಗೆ ಪಠ್ಯ ಪುಸ್ತಕ ಪೂರೈಕೆ ಮಾಡಬೇಕು. ಆ.30ರೊಳಗೆ ವಿವರಣೆ ನೀಡುವಂತೆ ಸರಕಾರಕ್ಕೆ ನ್ಯಾಯಪೀಠವು ನಿರ್ದೇಶನ ನೀಡಿದೆ.
ಅಲ್ಲದೆ, ಈ ಹಿಂದೆ ಆನ್‌ಲೈನ್ ತರಗತಿ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಕಲಿಕೆಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವಂತೆ ಸೂಚಿಸಿತ್ತು. ಸರಕಾರ ಮಾತ್ರ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ಇದು ಸಂವಿಧಾನದ ಪರಿಚ್ಛೇದ 14 ಹಾಗೂ 21(ಎ) ಅಡಿ ನೀಡಲಾಗಿರುವ ಶೈಕ್ಷಣಿಕ ಹಕ್ಕು, ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಹೀಗಾಗಿ, ಬಡ ಮಕ್ಕಳಿಗೆ ಆನ್‌ಲೈನ್‌ನಲ್ಲಿ ಪಾಠ ಕೇಳಲು ಪೂರಕವಾಗಿ ಲ್ಯಾಪ್ ಟಾಪ್, ಟ್ಯಾಬ್ಲೆಟ್, ಕಂಪ್ಯೂಟರ್ ಮತ್ತು ಹೈಸ್ಪೀಡ್ ಇಂಟರ್ ನೆಟ್ ಸೇರಿ ಎಲ್ಲಾ ಅಗತ್ಯ ಸೌಲಭ್ಯ ಉಚಿತವಾಗಿ ಒದಗಿಸುವಂತೆ ನ್ಯಾಯಪೀಠವು ಸರಕಾರಕ್ಕೆ ನಿರ್ದೇಶಿಸಿತ್ತು.







