ಆ.26-27ರ ರೈತ ಸಮಾವೇಶದಲ್ಲಿ 1500 ರೈತ ಪ್ರತಿನಿಧಿಗಳ ಉಪಸ್ಥಿತಿ
ಪ್ರತಿಭಟನೆಯ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚೆ ಸಾಧ್ಯತೆ
ಹೊಸದಿಲ್ಲಿ,ಆ.24: ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ರೈತಪ್ರತಿಭಟನೆಯ ಸಲುವಾಗಿ ತಮ್ಮ ಮುಂದಿನ ಕಾರ್ಯತಂತ್ರವನ್ನು ರೂಪಿಸಲು ಆಗಸ್ಟ್ 26 ಮತ್ತು 27ರಂದು ದಿಲ್ಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಸಮಾವೇಶದಲ್ಲಿ ದೇಶಾದ್ಯಂತದ 1500ಕ್ಕೂ ಅಧಿಕ ರೈತ ಒಕ್ಕೂಟಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆಂದು ರೈತ ನಾಯಕರು ತಿಳಿಸಿದ್ದಾರೆ.
ಎರಡು ದಿನಗಳ ಕಾಲ ನಡೆಯಲಿರುವ ಈ ಸಮಾವೇಶದಲ್ಲಿ ದೇಶಾದ್ಯಂತದ 1500 ರೈತ ಒಕ್ಕೂಟಗಳ ಪ್ರತಿನಿಧಿಗಳು ದಿಲ್ಲಿಯ ಸಿಂಘು ಗಡಿಯಲ್ಲಿ ಒಟ್ಟು ಸೇರಲಿದ್ದಾರೆ. ತಮ್ಮ ಪ್ರತಿಭಟನೆಗಳನ್ನು ತೀವ್ರಗೊಳಿಸುವ ಕುರಿತಾಗಿ ಅವರು ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದು ರೈತ ನಾಯಕ ಅಭಿಮನ್ಯು ಕೊಹರ್ ತಿಳಿಸಿದ್ದಾರೆ.
ರೈತ ಒಕ್ಕೂಟದ ಹಿಂದಿನ ಕಾರ್ಯಕ್ರಮಗಳಲ್ಲಿ ಇದ್ದಂತೆ ಈ ಸಮಾವೇಶದಲ್ಲಿ ಸಾರ್ವಜನಿಕ ಸಭೆಯಾಗಲಿ ಅಥವಾ ರ್ಯಾಲಿಯಾಗಲಿ ಇರುವುದಿಲ್ಲವೆಂದು ಅವರು ತಿಳಿಸಿದರು.
ದೇಶಾದ್ಯಂತದ ರೈತರನ್ನು ಒಗ್ಗೂಡಿಸುವುದೇ ಈ ಸಮಾವೇಶದ ಉದ್ದೇಶವಾಗಿದೆ. ಇದರಿಂದಾಗಿ ರೈತ ಪ್ರತಿಭಟನೆಯ ಕುರಿತಂತೆ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಎಲ್ಲರೂ ಭಾಗೀದಾರರಾಗುವಂತೆ ಮಾಡಲು ಸಾಧ್ಯವಾಗಲಿದೆ ಎಂದರು.
ಕಳೆದ 9 ತಿಂಗಳುಗಳಿಂದ ನಾವು ಪ್ರತಿಭಟನೆಗಳನ್ನು ನಡೆಸುತ್ತಿದ್ದೇವೆ. ಇದೇನೂ ಸಣ್ಣ ಅವಧಿಯಲ್ಲ. ಪೂರ್ವ, ಪಶ್ಚಿಮ, ದಕ್ಷಿಣ ಹಾಗೂ ಉತ್ತರ ಹೀಗೆ ದೇಶದ ಎಲ್ಲಾ ಭಾಗಗಳ ಜನರನ್ನು ಪ್ರತಿಭಟನೆಯಲ್ಲಿ ಸೇರ್ಪಡೆಗೊಳಿಸಲು ನಾವು ಬಯಸುತ್ತೇವೆ’’ ಎಂದು ಕೋಹರ್ ತಿಳಿಸಿದ್ದಾರೆ. ಸೆಪ್ಟೆಂಬರ್ 5ರಂದು ಉತ್ತರಪ್ರದೇಶದ ಮುಝಾಫರ್ನಗರದಲ್ಲಿ ನಡೆಯಲಿರುವ ರೈತರ ಮಹಾಪಂಚಾಯತ್ ಬಗ್ಗೆಯೂ ಸಮಾವೇಶದಲ್ಲಿ ಪ್ರಮುಖವಾಗಿ ಚರ್ಚಿಸಲಾಗುವುದು ಎಂದವರು ತಿಳಿಸಿದರು.
ಕೇಂದ್ರದ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಆಗಸ್ಟ್26ರಂದು ಒಂಭತ್ತು ತಿಂಗಳು ತುಂಬಲಿದೆ. ಮುಷ್ಕರಕ್ಕೆ ಸಂಬಂಧಿಸಿ ರೈತರು ಹಾಗೂ ಕೇಂದ್ರ ಸರಕಾರದ ನಡುವೆ 10 ಸುತ್ತಿನ ಮಾತುಕತೆ ನಡೆದಿದೆಯಾದರೂ, ಬಿಕ್ಕಟ್ಟು ಬಗೆಹರಿಯಲು ಸಾಧ್ಯವಾಗಿಲ್ಲ.







