ಅಪ್ಘಾನರಿಗೆ ಅಂತಾರಾಷ್ಟ್ರೀಯ ನೆರವು ಒದಗಿಸಲು ಅವಕಾಶ ನೀಡಿ: ಭಾರತ

ಹೊಸದಿಲ್ಲಿ, ಅ. 23: ಅಗತ್ಯ ಇರುವ ಎಲ್ಲ ಅಪ್ಘಾನ್ ಹಾಗೂ ಅಂತಾರಾಷ್ಟ್ರೀಯ ನೆರವು ತಡೆಯಿಲ್ಲದೆ ಒದಗಿಸಲು ಅವಕಾಶ ನೀಡುವಂತೆ ಅಪ್ಘಾನಿಸ್ಥಾನಕ್ಕೆ ಸಂಬಂಧಿಸಿದ ಎಲ್ಲರನ್ನೂ ಭಾರತ ಮಂಗಳವಾರ ಆಗ್ರಹಿಸಿದೆ.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ವಿಶೇಷ ಸಭೆಯಲ್ಲಿ ಹೊಸದಿಲ್ಲಿ ಅಪ್ಘಾನಿಸ್ಥಾನದಲ್ಲಿ ಆಹಾರ, ವೈದ್ಯಕೀಯ ಸೇವೆ ಹಾಗೂ ವಸತಿ ಕೊರತೆ ಕುರಿತು ಕಳವಳ ವ್ಯಕ್ತಪಡಿಸಿತು. ಅಪ್ಘಾನಿಸ್ಥಾನದ ಪ್ರಸಕ್ತ ಪರಿಸ್ಥಿತಿಯ ಕಾರಣದಿಂದ ಉಚಿತ ಶಿಕ್ಷಣ, ಆರೋಗ್ಯ ಸೇವೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರದ ಹಕ್ಕುಗಳಿಗೆ ಅಡ್ಡಿ ಉಂಟಾಗಿದೆ ಎಂದು ಭಾರತ ಹೇಳಿದೆ.
‘‘ಅಪ್ಘಾನಿಸ್ಥಾನದ ನೆರೆಯ ರಾಷ್ಟ್ರವಾಗಿ ಅಲ್ಲಿರುವ ಪ್ರಸಕ್ತ ಪರಿಸ್ಥಿತಿ ನಮಗೆ ತೀವ್ರ ಕಳವಳಕಾರಿ’’ ಎಂದು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಇಂದ್ರಮಣಿ ಪಾಂಡೆ ಅವರು ಸಭೆಯಲ್ಲಿ ತಿಳಿಸಿದರು. ದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವಂತೆ ಅವರು ಪ್ರತಿಯೊಬ್ಬರನ್ನು ಆಗ್ರಹಿಸಿದರು. ಅಪ್ಘಾನಿಸ್ಥಾನದ ಸ್ಥಿರತೆ ಈ ವಲಯದ ಶಾಂತಿ ಹಾಗೂ ಭದ್ರತೆಯೊಂದಿಗೆ ಸಂಬಂಧ ಹೊಂದಿದೆ ಎಂದು ಅವರು ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
‘‘ಅಫ್ಘಾನಿಸ್ಥಾನದ ಪರಿಸ್ಥಿತಿ ಅದರ ನೆರೆಯ ದೇಶಗಳಿಗೆ ಸವಾಲು ಒಡ್ಡದು ಎಂದು ನಾವು ಭಾವಿಸುತ್ತೇವೆ. ಅಲ್ಲದೆ, ಇತರ ಯಾವುದೇ ದೇಶಕ್ಕೆ ಬೆದರಿಕೆ ಒಡ್ಡಲು ಅದರ ಭೂಪ್ರದೇಶವನ್ನು ಲಷ್ಕರೆ ತಯ್ಯಿಬ ಹಾಗೂ ಜೈಶೆ ಮಹಮ್ಮದ್ ನಂತಹ ಭಯೋತ್ಪಾದನಾ ಸಂಘಟನೆಗಳು ಬಳಸದು ’’ ಎಂದು ಪಾಂಡೆ ಹೇಳಿದ್ದಾರೆ.
ಸಮಾಜದ ಎಲ್ಲ ವರ್ಗವನ್ನು ಪ್ರತಿನಿಧಿಸುವ ಎಲ್ಲರನ್ನೂ ಒಳಗೊಂಡ ಹಾಗೂ ವಿಶಾಲ ತಳಹದಿಯ ಆಡಳಿತ ವ್ಯವಸ್ಥೆಯನ್ನು ಭಾರತ ನಿರೀಕ್ಷಿಸುತ್ತದೆ ಎಂದು ವಿಶ್ವಸಂಸ್ಥೆಯ ಖಾಯಂ ಪ್ರತಿನಿಧಿ ಹೇಳಿದರು. ಅಫ್ಘಾನಿಸ್ಥಾನದ ಮಹಿಳೆಯರ ಧ್ವನಿ, ಅಫ್ಘಾನ್ ಮಕ್ಕಳ ಆಕಾಂಕ್ಷೆ ಹಾಗೂ ಅಲ್ಪಸಂಖ್ಯಾತರ ಹಕ್ಕುಗಳಿಗೆ ಗೌರವ ನೀಡಬೇಕು ಎಂದು ಅವರು ಹೇಳಿದರು.
ಅಪ್ಘಾನಿಸ್ಥಾನಲ್ಲಿ ಅಭಿವೃದ್ಧಿಗೆ ಭಾರತ ನೀಡುವ ಕೊಡುಗೆಯಲ್ಲಿ ನೀರು ಪೂರೈಕೆ, ರಸ್ತೆ, ಆರೋಗ್ಯ ಸೇವೆ, ಶಿಕ್ಷಣ ಹಾಗೂ ಕೃಷಿಗೆ ಸಂಬಂಧಿಸಿದ ವಿಷಯಗಳು ಒಳಗೊಂಡಿವೆ ಎಂದು ಹೇಳಿಕೆ ತಿಳಿಸಿದೆ.







