ಪುತ್ತೂರು: ವ್ಯಕ್ತಿಯೋರ್ವನಿಗೆ ತಂಡದಿಂದ ಹಲ್ಲೆ, ಕಾರಿಗೆ ಹಾನಿ; 6 ಮಂದಿ ಪೊಲೀಸ್ ವಶಕ್ಕೆ

ಪುತ್ತೂರು, ಆ.25: ಕಾರಿಗೆ ಇಂಧನ ತುಂಬಿಸಲು ಬಂದಿದ್ದ ವ್ಯಕ್ತಿಯೋರ್ವನಿಗೆ ತಂಡವೊಂದು ಹಲ್ಲೆಗೈದು, ಕಾರಿಗೆ ಹಾನಿಯುಂಟು ಮಾಡಿರುವ ಘಟನೆ ನಗರದ ದರ್ಬೆಯ ಪೆಟ್ರೋಲ್ ಬಂಕ್ ಒಂದರಲ್ಲಿ ಮಂಗಳವಾರ ರಾತ್ರಿ ನಡೆದಿರುವುದು ವರದಿಯಾಗಿದೆ.
ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಕೇಸು ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.
ತಂಡದಿಂದ ಹಲ್ಲೆಗೊಳಗಾದ ಪುತ್ತೂರು ತಾಲೂಕಿನ ಕೆಮ್ಮಾಯಿ ನಿವಾಸಿ ರಾಧಾಕೃಷ್ಣ (44) ಎಂಬವರು ಗಾಯಗೊಂಡಿದ್ದು, ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಯಿಂದ ಅವರ ಇನ್ನೋವಾ ಕಾರಿಗೂ ಹಾನಿಯಾಗಿದೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಹಲ್ಲೆ ಆರೋಪಿಗಳಾದ ಕಿಶೋರ್ ಗೋಳ್ತಮಜಲು, ರಾಕೇಶ್ ಚೋಡಿ, ರೆಹಮಂತ್, ಇಬ್ರಾಹೀಂ ಕಬಕ, ದೇವಿಪ್ರಸಾದ್, ಅಶ್ರಫ್ ಪೆರಾಜೆ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಎರಡು ವರ್ಷಗಳ ಹಿಂದೆ ನಡೆದ ಸಂಪ್ಯದ ಕಾರ್ತಿಕ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲಿನಲ್ಲಿರುವ ಪ್ರಿತೇಶ್ ಎಂಬಾತನ ಪರ ನ್ಯಾಯಾಲಯದಲ್ಲಿ ಸಾಕ್ಷಿ ನುಡಿಯಬೇಕು ಎಂದು ಆರೋಪಿ ಕಿಶೋರ್ ಕಳೆದ 3 ದಿನಗಳ ಹಿಂದೆ ರಾಧಾಕೃಷ್ಣರನ್ನು ಒತ್ತಾಯಿಸಿದ್ದು, ಈ ಬಗ್ಗೆ ಅವರ ನಡುವೆ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ. ಇದೇ ವಿಚಾರದಲ್ಲಿ ಈ ಹಲ್ಲೆ ನಡೆದಿದೆ ಎಂದು ತಿಳಿದು ಬಂದಿದೆ.







