ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಭಾಗವಹಿಸಲಿರುವ ಕರ್ನಾಟಕ ಮೂಲದ ಐಎಎಸ್ ಅಧಿಕಾರಿ ಸುಹಾಸ್

Photo: Twitter
ಹೊಸದಿಲ್ಲಿ: ನೊಯ್ಡಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಹಾಗೂ ಪ್ಯಾರಾ-ಬ್ಯಾಡ್ಮಿಂಟನ್ ಆಟಗಾರ ಸುಹಾಸ್ ಎಲ್ ಯತಿರಾಜ್ ಅವರು ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಭಾಗವಹಿಸಿ ಭಾರತಕ್ಕೆ ಪದಕ ದೊರಕಿಸಿಕೊಡಲು ಸಜ್ಜಾಗಿದ್ದಾರೆ.
ಸದ್ಯ ಪುರುಷರ ಸಿಂಗಲ್ ಪ್ಯಾರಾ ಬ್ಯಾಡ್ಮಿಂಟನ್ನಲ್ಲಿ ವಿಶ್ವದ ನಂ. 2 ಆಗಿರುವ ಈ ಐಎಎಸ್ ಅಧಿಕಾರಿ ಈ ಹಿಂದೆ 2016ರಲ್ಲಿ ಬೀಜಿಂಗ್ನಲ್ಲಿ ನಡೆದಿದ್ದ ಬಿಡಬ್ಲ್ಯುಎಫ್ ಏಷ್ಯನ್ ಪ್ಯಾರಾ-ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದಿದ್ದರು.
ಬ್ಯಾಡ್ಮಿಂಟನ್ ಆಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಏಕೈಕ ಕ್ರೀಡಾಳು ಆಗಿರುವ ಸುಹಾಸ್ ಕರ್ನಾಟಕದವರಾಗಿದ್ದಾರೆ. ತನ್ನ ಭಿನ್ನ ಸಾಮರ್ಥ್ಯವನ್ನು ಸವಾಲಾಗಿ ಸ್ವೀಕರಿಸಿರುವ ಸುಹಾಸ್ ಎನ್ಐಟಿಕೆ-ಸುರತ್ಕಲಿನಿಂದ ಕಂಪ್ಯೂಟರ್ ಸಾಯನ್ಸ್ ಮತ್ತು ಇಂಜಿನಿಯರಿಂಗ್ ಪದವೀಧರರಾಗಿದ್ದಾರೆ. ಮುಂದೆ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಿ ಅವರು 2007ರಲ್ಲಿ ಪರೀಕ್ಷೆ ತೇರ್ಗಡೆಗೊಂಡಿದ್ದರು. ಈ ವರ್ಷದ ಮಾರ್ಚ್ ತಿಂಗಳಲ್ಲಿ ಅವರನ್ನು ನೊಯ್ಡಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ನೇಮಕ ಮಾಡಲಾಗಿತ್ತು.
ಪ್ಯಾರಾಲಿಂಪಿಕ್ಸ್ ನಲ್ಲಿ ಭಾಗವಹಿಸಲು ಅರ್ಹತೆಗಾಗಿ 2019ರಲ್ಲಿ ನಡೆದ ಬ್ರೆಜಿಲ್ ಓಪನ್ ಮತ್ತು ಫೆಬ್ರವರಿ 2019ರಲ್ಲಿ ನಡೆದ ಪೆರು ಓಪನ್ ಸ್ಪರ್ಧೆಯಲ್ಲೂ ಅವರು ಚಿನ್ನ ಗಳಿಸಿದ್ದರು.