ಯುಪಿಎ ಸರಕಾರ ಇದ್ದಿದ್ದರೆ ತಾಲಿಬಾನಿಗಳನ್ನು ದೇಶಕ್ಕೆ ಕರೆತರುತ್ತಿತ್ತು : ನಳಿನ್‍ಕುಮಾರ್ ಕಟೀಲು

ಮಂಡ್ಯ, ಆ.25: 'ಇಂದು ದೇಶದಲ್ಲಿ ಯುಪಿಎ ಸರಕಾರವಿದ್ದಿದ್ದರೆ ಆಫ್ಘಾನಿಸ್ತಾನದಿಂದ ತಾಲಿಬಾನಿಗಳನ್ನು ಕರೆತಂದು ಒಂದು ರಾಜಧಾನಿ ನಿರ್ಮಿಸಿಕೊಡುತ್ತಿತ್ತು' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲು ಟೀಕಿಸಿದ್ದಾರೆ.
ಬುಧವಾರ ನಗರದ ಸುಮಾರವಿ ಸಮುದಾಯ ಭವನದಲ್ಲಿ ನಡೆದ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, 'ನರೇಂದ್ರ ಮೋದಿ ಅವರು ವಿಶೇಷ ವಿಮಾನದ ಮೂಲಕ ಅಫ್ಘಾನಿಸ್ಥಾನಿಂದ ಭಾರತೀಯರನ್ನು ರಕ್ಷಣೆ ಮಾಡಿದ್ದಾರೆ' ಎಂದರು.
ರಾಜ್ಯ ಕಾಂಗ್ರೆಸ್‍ನವರು ಒಳಜಗಳದಲ್ಲಿ ಮುಳುಗಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಖುರ್ಚಿಗಾಗಿ ಈಗಲೇ ಗುದ್ದಾಡುತ್ತಿದ್ದಾರೆ. ಬಸವರಾಜ ಬೊಮ್ಮಾಯಿ ಸರಕಾರ ಉತ್ತಮ ಆಡಳಿತ ನಡೆಸುತ್ತಿದ್ದು, ಇನ್ನೂ 20 ವರ್ಷ ಬಿಜೆಪಿ ಅಧಿಕಾರದಲ್ಲಿ ಇರಲಿದೆ ಎಂದು ಅವರು ಹೇಳಿಕೊಂಡರು.
ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯನ್ನು ಭದ್ರಗೊಳಿಸಲು ಮಂಡ್ಯದಲ್ಲಿ ರಾಜ್ಯ ಪದಾಧಿಕಾರಿಗಳ ಸಭೆ ನಡೆಸಿ ಚರ್ಚಿಸಲಾಗುತ್ತಿದೆ. ಮಂಡ್ಯದಲ್ಲಿ ಒಂದು ಜಾತಿಯ ಕುಟುಂಬ ರಾಜಕಾರಣಕ್ಕೆ ಅಂತ್ಯವಾಡುತ್ತೇವೆ ಎಂದು ಅವರು ಹೇಳಿದರು.
ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ. ಮೈಸೂರು ಸಕ್ಕರೆ ಕಾರ್ಖಾನೆ(ಮೈಷುಗರ್) ಆರಂಭಿಸಲು ಕ್ರಮವಹಿಸಲಾಗುತ್ತಿದೆ. ಹಾಗೆಯೇ ಜಿಲ್ಲೆಯಲ್ಲಿನ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲಾಗಿದೆ ಎಂದು ಅವರು ಹೇಳಿದರು.
ಮಾಜಿ ಸಚಿವ ಸಿ.ಟಿ.ರವಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಪರಿಷತ್ ಮಾಜಿ ಸದಸ್ಯ ಅಶ್ವಥನಾರಾಯಣ, ಬಿಜೆಪಿ ಜಿಲ್ಲಾಧ್ಯಕ್ಷ ವಿಜಯಕುಮಾರ್ ಹಾಗೂ ಇತರೆ ಮುಖಂಡರು ಉಪಸ್ಥಿತರಿದ್ದರು.
ಕೋವಿಡ್ ನಿಯಮ ಉಲ್ಲಂಘನೆ:
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದ ಜನಾರ್ಶೀವಾದ ಯಾತ್ರೆಯಂತೆಯೇ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲೂ ಕೋವಿಡ್ ನಿಯಮಗಳ ಉಲ್ಲಂಘನೆ ಆಯಿತು. ನಿಯಮ ಮರೆತು ನೂರಾರು ಕಾರ್ಯಕರ್ತರು ಗುಂಪು ಸೇರಿದ್ದರು. ಅದೂ ಅಲ್ಲದೆ, ಜತೆಗೂಡಿ ಬೈಕ್ ರ್‍ಯಾಲಿಯನ್ನೂ ನಡೆಸಲಾಯಿತು.







