ಕೇಂದ್ರದಿಂದ ಸಾರ್ವಜನಿಕ ಆಸ್ತಿ ಖಾಸಗೀಕರಣ: ಸಿ.ಟಿ.ರವಿ ಸಮರ್ಥನೆ

ಮಂಡ್ಯ, ಆ.25: ಸಾರ್ವಜನಿಕ ಆಸ್ತಿಯನ್ನು ಉತ್ಪಾದಕ ಘಟಕವನ್ನಾಗಿ ಮಾರ್ಪಡಿಸಲು ಖಾಸಗಿ ಕಂಪನಿಗಳಿಗೆ ನೀಡಲಾಗುತ್ತಿದೆ ಎಂದು ಕೇಂದ್ರ ಸರಕಾರದ ನಡೆಯನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಮರ್ಥಿಸಿಕೊಂಡಿದ್ದಾರೆ.
ಬುಧವಾರ ಪತ್ರಿಕಾ ಭವನದಲ್ಲಿ ನಡೆದ ಮಾಧ್ಯಮ ಸಂವಾದಲ್ಲಿ ಮಾತನಾಡಿದ ಅವರು, ಸರಕಾರಕ್ಕೆ ಬಿಳಿ ಆನೆಗಳನ್ನು ಸಾಕುವ ಬಗ್ಗೆ ಆಸಕ್ತಿ ಇಲ್ಲ. ಇದು ಹೊಸದೇನೂ ಅಲ್ಲ, ಸಾರ್ವಜನಿಕ ಆಸ್ತಿಯನ್ನು ಗುತ್ತಿಗೆ ನೀಡುವುದು 1991ರಿಂದಲೇ ಪ್ರಾರಂಭವಾಗಿದೆ ಎಂದರು.
ರಾಜ್ಯಕ್ಕೆ ಅಗತ್ಯಕ್ಕಿಂತ ಹೆಚ್ಚು ಅನುದಾನವನ್ನು ಕೇಂದ್ರ ಸರಕಾರ ನೀಡಿದೆ. ಇದರಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ. ರೈಲ್ವೆ, ರಾಷ್ಟ್ರೀಯ ಹೆದ್ದಾರಿ, ಜಲಧಾರೆ ಯೋಜನೆಗಳಿಗೆ ಮೋದಿ ಅವರು ಹೆಚ್ಚು ಅನುದಾನ ನೀಡಿದ್ದಾರೆ ಎಂದು ಅವರು ಹೇಳಿದರು.
ಹಿಂದಿನ ಸರಕಾರದ ಆಯಿಲ್ ಬಾಂಡ್ ಸಾಲ ತೀರಿಸಲು ಪೆಟ್ರೋಲ್, ಡೀಸಲ್, ಗ್ಯಾಸ್ ದರ ಹೆಚ್ಚಿಸಲಾಗಿದೆ. ಜತೆಗೆ ಇದರಿಂದ ಬಂದ ಹಣ ಸ್ವಲ್ಪವೂ ದುರುಪಯೋಗವಾಗದೆ ಕೇಂದ್ರ ಸರಕಾರದ ಹಲವು ಯೋಜನೆಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಬೆಲೆ ಏರಿಕೆ ಸಮರ್ಥಿಸಿಕೊಂಡರು.





