ಮೈಸೂರು ಗ್ಯಾಂಗ್ ರೇಪ್ ಪ್ರಕರಣ: ಎಡಿಜಿಪಿ ನೇತೃತ್ವದಲ್ಲಿ ತನಿಖಾ ತಂಡ ರಚನೆ; ಸಚಿವ ಎಸ್.ಟಿ.ಸೋಮಶೇಖರ್

ಸಚಿವ ಎಸ್.ಟಿ.ಸೋಮಶೇಖರ್
ಮೈಸೂರು,ಆ.25: ವಿದ್ಯಾರ್ಥಿನಿ ಮೇಲೆ ನಡೆದಿರುವ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಡಿಜಿಪಿ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಲಾಗಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ವಿದ್ಯಾರ್ಥಿನಿ ಮೇಲೆ ನಡೆದ ಗ್ಯಾಂಗ್ ರೇಪ್ಗೆ ಸಂಬಂಧಿಸಿದಂತೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಅತೀ ಶೀಘ್ರದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಯುವತಿಯ ಜೊತೆಗಿದ್ದ ಯುವಕನ ಮಾಹಿತಿ ಆಧರಿಸಿ ಪೊಲೀಸರು ಎಫ್.ಐ.ಆರ್ ದಾಖಲಿಸಿದ್ದಾರೆ. ಘಟನೆಯ ಎಲ್ಲಾ ವಿವರಗಳನ್ನು ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ತಿಳಿಸಿದ್ದೇನೆ. ಎಲ್ಲವನ್ನೂ ಮಾಧ್ಯಮದ ಮುಂದೆ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.
ಯುವತಿ ಆಸ್ಪತ್ರೆಯಲ್ಲಿ ಇದ್ದಾಳೆ, ಆಕೆಯ ಆರೋಗ್ಯ ದೃಢವಾಗಿದ್ದು, ಆಕೆಗೆ ಎಲ್ಲಾ ರೀತಿಯ ರಕ್ಷಣೆ ನೀಡಲಾಗಿದೆ. ಮೈಸೂರಿಗೆ ಕಪ್ಪು ಚುಕ್ಕೆ ತರುವಂತ ಘಟನೆ ಮತ್ತೊಮ್ಮೆ ಮರುಕಳಿಸದಂತೆ ಸೂಕ್ತ ಭದ್ರತೆ ವ್ಯವಸ್ಥೆ ಮಾಡುವಂತೆ ತಿಳಿಸಿದ್ದೇನೆ. ಗಸ್ತನ್ನು ಹೆಚ್ಚು ಮಾಡುವಂತೆ ಸೂಚಿಸಿದ್ದೇನೆ. ಮೈಸೂರಿನ ಜನ ಆತಂಕ ಪಡಬೇಕಿಲ್ಲ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ದೂರು ದಾಖಲಾಗಿದೆ. ಇದೊಂದು ಸೂಕ್ಷ್ಮ ಪ್ರಕರಣ, ಅಷ್ಟೇ ಗಂಭೀರವಾಗಿ ತನಿಖೆ ಆರಂಭಿಸಿದ್ದೇವೆ. ದೂರುದಾರ, ಘಟನೆ ಸಂತ್ರಸ್ತೆ ಬಗ್ಗೆ ಚಿಕ್ಕ ವಿವರವನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ.
-ಡಾ.ಚಂದ್ರಗುಪ್ತ,ನಗರ ಪೊಲೀಸ್ ಆಯುಕ್ತ.








