ಡಾ.ಉಪ್ಪಂಗಳ, ಡಾ.ಕೆ.ಎಸ್.ಭಟ್ ನಿಧನಕ್ಕೆ ಶ್ರದ್ಧಾಂಜಲಿ
ಉಡುಪಿ, ಆ.25: ಎಂಜಿಎಂ ಕಾಲೇಜಿನ ಕನ್ನಡ ವಿಭಾಗದ ಮಾಜಿ ಮುಖ್ಯಸ್ಥ, ಖ್ಯಾತ ಸಾಹಿತಿ, ವಿದ್ವಾಂಸ ಡಾ.ಉಪ್ಪಂಗಳ ರಾಮಭಟ್ ಹಾಗೂ ಕಡೆಂಗೋಡ್ಲು ಶಂಕರ ಭಟ್ಟರ ಪುತ್ರ, ಕೆಎಂಸಿ ದಂತ ಚಿಕಿತ್ಸಾ ವಿಭಾಗದ ಮಾಜಿ ಡೀನ್ ಆಗಿದ್ದ ಡಾ. ಕೆ.ಎಸ್. ಭಟ್ ಇವರ ನಿಧನಕ್ಕೆ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿ ಸಂತಾಪ ಸೂಚನಾ ಸಭೆ ಜರುಗಿತು.
ಸಭೆಯಲ್ಲಿ ಮಾತನಾಡಿದ ಬ್ರಹ್ಮಾವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾರಾಯಣ ಮಡಿ ಹಾಗೂ ಎಂಜಿಎಂ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥ ಡಾ.ಪುತ್ತಿ ವಸಂತ ಕುಮಾರ್, ಡಾ.ರಾಮ ಭಟ್ ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆಯ ಬಗ್ಗೆ ಮಾತನಾಡಿದರು. ಅದೇ ರೀತಿ ಡಾ. ಕೆ. ಎಸ್. ಭಟ್ ಅವರು ತನ್ನ ತಂದೆಯ ಹೆಸರಿನಲ್ಲಿ ದತ್ತಿ ಸ್ಥಾಪಿಸಿ ಸಾಹಿತ್ಯವನ್ನು ಪೋಷಿಸಿದ ರೀತಿಯನ್ನು ಶ್ಲಾಘಿಸಿದರು.
ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು. ಇವರಿಬ್ಬರ ನಿಧನ ಕನ್ನಡ ಸಾಹಿತ್ಯ ಲೋಕಕ್ಕೆ ದೊಡ್ಡ ನಷ್ಟ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ.ಜಗದೀಶ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





