ಉಡುಪಿ : ಕೋವಿಡ್‌ಗೆ 3 ಬಲಿ; 130 ಮಂದಿಗೆ ಕೊರೋನ ಪಾಸಿಟಿವ್

ಉಡುಪಿ, ಆ. 25: ಜಿಲ್ಲೆಯಲ್ಲಿ ಬುಧವಾರ ಮೂವರು ಪುರುಷರು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಒಟ್ಟು 130 ಮಂದಿಯಲ್ಲಿ ಸೋಂಕು ಹೊಸದಾಗಿ ದೃಢಪಟ್ಟಿದೆ. ದಿನದಲ್ಲಿ 132 ಮಂದಿ ಸೋಂಕಿನಿಂದ ಚೇತರಿಸಿಕೊಂಡರೆ, ಸೋಂಕಿಗೆ ಸಕ್ರಿಯರಾಗಿರುವವರ ಸಂಖ್ಯೆ 1586 ಆಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.
ಇಂದು ಉಡುಪಿಯ 45 ವರ್ಷ ಹಾಗೂ ಕುಂದಾಪುರ ತಾಲೂಕಿನ 76 ಮತ್ತು 47 ವರ್ಷದ ಪುರುಷರು ಕೋವಿಡ್‌ಗೆ ಬಲಿಯಾಗಿದ್ದಾರೆ. ಕುಂದಾಪುರದ ಇಬ್ಬರು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾದ 24 ಗಂಟೆಗಳಲ್ಲಿ ಮೃತಪಟ್ಟಿದ್ದಾರೆ. ಇವರಲ್ಲಿ ಒಬ್ಬರು ಮಂಗಳವಾರ, ಮತ್ತಿಬ್ಬರು ಬುಧವಾರ ಸಾವನ್ನಪ್ಪಿದ್ದಾರೆ. ಈಗ ಕೋವಿಡ್ ರೋಗಿಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ರೋಗ ಲಕ್ಷಣ ದೊಂದಿಗೆ ಉಸಿರಾಟದ ತೊಂದರೆ ಹಾಗೂ ನ್ಯುಮೋನಿಯದಿಂದ ನರಳುತಿದ್ದರು. ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಬಲಿಯಾದವರ ಸಂಖ್ಯೆ 445ಕ್ಕೇರಿದೆ.
ಇಂದು ಕೊರೋನ ಸೋಂಕು ದೃಢಪಟ್ಟ 130 ಮಂದಿಯಲ್ಲಿ 62 ಮಂದಿ ಪುರುಷರು ಹಾಗೂ 68 ಮಂದಿ ಮಹಿಳೆಯರು. ಪಾಸಿಟಿವ್ ಬಂದವರಲ್ಲಿ 73 ಮಂದಿ ಉಡುಪಿ ತಾಲೂಕು, 22 ಮಂದಿ ಕುಂದಾಪುರ ಹಾಗೂ 35ಮಂದಿ ಕಾರ್ಕಳ ತಾಲೂಕಿನವರು. ಪಾಸಿಟಿವ್ ಬಂದವರಲ್ಲಿ 26 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಹಾಗೂ 104 ಮಂದಿ ಮನೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
ಮಂಗಳವಾರ 132 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೆ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 71,154ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ 8276 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಈವರೆಗೆ ಜಿಲ್ಲೆಯಲ್ಲಿ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 73,185ಕ್ಕೇರಿದೆ ಎಂದು ಡಾ.ಉಡುಪ ತಿಳಿಸಿದರು. ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 9,15,475 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ.
ಓರ್ವ ಚಿಕಿತ್ಸೆಗೆ ದಾಖಲು: ಜಿಲ್ಲೆಯಲ್ಲಿ ಇಂದು ಹೊರಜಿಲ್ಲೆಯ ಒಬ್ಬರು ಬ್ಲಾಕ್ ಫಂಗಸ್ ಸೋಂಕಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿ ದ್ದಾರೆ. ಹೀಗಾಗಿ ಸದ್ಯ ಹೊರಜಿಲ್ಲೆಗಳ ಮೂವರು ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿಗೆ ಚಿಕಿತ್ಸೆ ಪಡೆಯುತಿದ್ದಾರೆ.
1,570 ಮಂದಿಗೆ ಲಸಿಕೆ: ಉಡುಪಿ ಜಿಲ್ಲೆಯಲ್ಲಿ ಬುಧವಾರ 1,570 ಮಂದಿಗೆ ಕೋವಿಡ್ ಲಸಿಕೆಯನ್ನು ನೀಡಲಾಗಿದೆ. ಇದರಲ್ಲಿ 829 ಮಂದಿಗೆ ಮೊದಲ ಡೋಸ್ ಹಾಗೂ 741 ಮಂದಿಗೆ ಎರಡನೇ ಡೋಸ್ ನೀಡಲಾಗಿದೆ ಎಂದು ಡಿಎಚ್‌ಓ ಡಾ. ನಾಗಭೂಷಣ ಉಡುಪ ತಿಳಿಸಿದ್ದಾರೆ.
18ರಿಂದ 44 ವರ್ಷದೊಳಗಿನ 611 ಮಂದಿ ಮೊದಲ ಹಾಗೂ 441 ಮಂದಿ ಎರಡನೇ ಡೋಸ್ ಪಡೆದಿದ್ದರೆ, 45 ವರ್ಷ ಮೇಲಿನ 218 ಮಂದಿಗೆ ಮೊದಲ ಹಾಗೂ 300 ಮಂದಿಗೆ ಎರಡನೇ ಡೋಸ್ ಲಸಿಕೆಯನ್ನು ನೀಡಲಾಗಿದೆ.







