ಮಸೀದಿ, ಚರ್ಚ್ಗಳಲ್ಲಿ ಪ್ರಾರ್ಥನೆ ನಡೆಯುತ್ತಿದ್ದರೆ ಗಣೇಶೋತ್ಸವಕ್ಕೂ ಅನುಮತಿ ನೀಡಿ: ಸಂಸದ ಪ್ರತಾಪ್ ಸಿಂಹ ಒತ್ತಾಯ

ಸಂಸದ ಪ್ರತಾಪ್ ಸಿಂಹ
ಮೈಸೂರು,ಆ.25: ಮಸೀದಿಗಳಲ್ಲಿ ನಮಾಜ್, ಚರ್ಚ್ಗಳಲ್ಲಿ ಪ್ರಾರ್ಥನೆ ನಡೆಯುತ್ತಿದ್ದರೆ ಗಣೇಶೋತ್ಸವಕ್ಕೂ ಅವಕಾಶ ನೀಡಬೇಕು ಎಂದು ಸಂಸದ ಪ್ರತಾಪ್ ಸಿಂಹ ಒತ್ತಾಯಿಸಿದ್ದಾರೆ.
ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋವಿಡ್-19ರ ಹಿನ್ನಲೆಯಲ್ಲಿ ಗಣೇಶೋತ್ಸವಕ್ಕೆ ಅನುಮತಿ ನೀಡಲು ರಾಜ್ಯ ಸರ್ಕಾರ ಚಿಂತಿಸುತ್ತಿರುವ ಬೆನ್ನಲ್ಲೇ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಮಸೀದಿಗಳಲ್ಲಿ ಶುಕ್ರವಾರ ಸಾಮೂಹಿಕ ನಮಾಜ್, ಚರ್ಚ್ಗಳಲ್ಲಿ ರವಿವಾರ ಪ್ರಾರ್ಥನೆ ನಡೆಯುತ್ತಿದ್ದರೆ ಗಣೇಶೋತ್ಸವಕ್ಕೂ ಅನುಮತಿ ನೀಡಬೇಕು ಎಂದು ಹೇಳಿದರು.
ಇದಕ್ಕೆಲ್ಲಾ ಅವಕಾಶ ನೀಡಿದ ಮೇಲೆ ಗಣೇಶೋತ್ಸವಕ್ಕೂ ಅವಕಾಶ ನೀಡಬೇಕು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಲ್ಲಾ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಆಚರಣೆಗೆ ಅವಕಾಶ ಮಾಡಿಕೊಡುತ್ತಾರೆ ಎಂಬ ನಂಬಿಕೆ ನಮಗಿದೆ ಎಂದು ಹೇಳಿದರು.
ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಿಸಬೇಕು ಎಂದು ನಾನು ಹೇಳುತ್ತಿಲ್ಲ, ಕೊರೋನಾ ಮೂರನೆ ಅಲೆ ಮರುಕಳಿಸಬಹುದು ಎಂಬ ಭಯವಿದೆ. ಹೀಗಾಗಿ ಕೋವಿಡ್ ಮಾರ್ಗ ಸೂಚಿ ಅನುಸರಿಸಿ ಗಣೇಶೋತ್ಸವ ಅಚರಣೆ ಮಾಡಬೇಕಿದೆ. ಕೊರೋನಾ ತಡೆಗಟ್ಟುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.







