ಬ್ಯಾಂಕ್ ಉದ್ಯೋಗಿಗಳ ಕುಟುಂಬ ಪಿಂಚಣಿ ಮೊತ್ತ ಕೊನೆಯ ವೇತನದ ಶೇ.30ಕ್ಕೇರಿಕೆ

ಹೊಸದಿಲ್ಲಿ,ಆ.25: ಬ್ಯಾಂಕ್ ಉದ್ಯೋಗಿಗಳ ಕುಟುಂಬ ಪಿಂಚಣಿ ಮೊತ್ತವನ್ನು ಕೇಂದ್ರ ಸರಕಾರವು ಬುಧವಾರ ಹೆಚ್ಚಿಸಿದೆ. ಈಗ ಬ್ಯಾಂಕ್ ಉದ್ಯೋಗಿಗಳ ಕುಟುಂಬಗಳು ಕೊನೆಯದಾಗಿ ಸ್ವೀಕರಿಸಿದ್ದ ವೇತನದ ಶೇ.30ರಷ್ಟು ಏಕರೂಪ ಶ್ರೇಣಿಯ ಪಿಂಚಣಿಯನ್ನು ಪಡೆಯಲಿವೆ. ಈ ಕ್ರಮದಿಂದಾಗಿ ಈ ಕುಟುಂಬಗಳ ಪಿಂಚಣಿ ಸೌಲಭ್ಯಗಳಲ್ಲಿ 30,000 ರೂ.ನಿಂದ 35,000 ರೂ.ವರೆಗೂ ಏರಿಕೆಯಾಗಲಿದೆ ಎಂದು ಹಣಕಾಸು ಸೇವೆಗಳ ಕಾರ್ಯದರ್ಶಿ ದೇಬಾಶಿಷ್ ಪಂಡಾ ಅವರು ಬುಧವಾರ ತಿಳಿಸಿದರು.
ಈ ಹಿಂದೆ ಗರಿಷ್ಠ ಮಿತಿಯನ್ನು 9,284 ರೂ.ಗಳಿಗೆ ನಿಗದಿಗೊಳಿಸಲಾಗಿತ್ತು.
ಪಿಂಚಣಿದಾರರ ವಿವಿಧ ವರ್ಗಗಳಿಗೆ ಶೇ.15,ಶೇ.20 ಮತ್ತು ಶೇ.30ರ ಶ್ರೇಣಿದರಗಳಲ್ಲಿ ನೀಡುತ್ತಿರುವ ಕುಟುಂಬ ಪಿಂಚಣಿಯನ್ನು ಯಾವುದೇ ಗರಿಷ್ಠ ಮಿತಿಯಿಲ್ಲದೆ ಒದಗಿಸುವಂತೆ ಇಂಡಿಯನ್ ಬ್ಯಾಂಕಿಂಗ್ ಅಸೋಷಿಯೇಷನ್ ಶಿಫಾರಸು ಮಾಡಿತ್ತು.
ಸಾವಿರಾರು ಬ್ಯಾಂಕ್ ಉದ್ಯೋಗಿಗಳು ಮತ್ತು ಅವರ ಕುಟುಂಬಗಳಿಗೆ ಲಾಭವಾಗುವಂತೆ ಈ ಶಿಫಾರಸನ್ನು ಒಪ್ಪಿಕೊಳ್ಳಲು ಸರಕಾರವು ನಿರ್ಧರಿಸಿದೆ.
ಪಿಂಚಣಿ ನಿಧಿಗೆ ಉದ್ಯೋಗದಾತರ ದೇಣಿಗೆಯನ್ನು ಈಗಿನ ಶೇ.10ರಿಂದ ಶೇ.14ಕ್ಕೆ ಹೆಚ್ಚಿಸುವಂತೆಯೂ ಸರಕಾರವು ಬ್ಯಾಂಕುಗಳಿಗೆ ಸೂಚಿಸಿದೆ.
ವಿತ್ತಸಚಿವೆ ಸೀತಾರಾಮನ್ ಅವರು ಬುಧವಾರ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳ ಕಾರ್ಯ ನಿರ್ವಹಣೆಯನ್ನು ಪುನರ್ ಪರಿಶೀಲಿಸಿದ್ದು, ವಿವಿಧ ಬ್ಯಾಂಕುಗಳ ಆಡಳಿತ ನಿರ್ದೇಶಕರು ಮತ್ತು ಸಿಇಒಗಳನ್ನು ಭೇಟಿಯಾಗಿ ಬೇಡಿಕೆಯನ್ನು ಸೃಷ್ಟಿಸಲು ಮತ್ತು ಬಳಕೆಯನ್ನು ಉತ್ತೇಜಿಸಲು ಬ್ಯಾಂಕಿಂಗ್ ಉದ್ಯಮವು ಸಾಧಿಸಿರುವ ಪ್ರಗತಿಯ ಕುರಿತು ಚರ್ಚಿಸಿದರು.
ಸಾಲ ಬೇಡಿಕೆಯನ್ನು ಹೆಚ್ಚಿಸುವ ಪ್ರಯತ್ನವಾಗಿ ಬ್ಯಾಂಕುಗಳು ದೇಶದ ಪ್ರತಿ ಜಿಲ್ಲೆಯಲ್ಲಿಯೂ ಸಾಲ ಕೊಡುಗೆಗಳನ್ನು ಪ್ರದರ್ಶಿಸಲಿವೆ ಎಂದು ಹೇಳಿದ ಸೀತಾರಾಮನ್,ಬದಲಾಗಿರುವ ಸಮಯದೊಂದಿಗೆ ಕೈಗಾರಿಕೆಗಳು ಈಗ ಬ್ಯಾಂಕಿಂಗ್ ಕ್ಷೇತ್ರದ ಹೊರಗಿನಿಂದಲೂ ಸಾಲಗಳನ್ನೆತ್ತುವ ಆಯ್ಕೆಯನ್ನು ಹೊಂದಿವೆ.
ಬ್ಯಾಂಕುಗಳು ಖುದ್ದಾಗಿ ವಿವಿಧ ಮಾರ್ಗಗಳ ಮೂಲಕ ನಿಧಿಗಳನ್ನು ಎತ್ತುತ್ತಿವೆ. ಅಗತ್ಯವಿರುವಲ್ಲಿ ಗುರಿ ನಿರ್ದೇಶಿತ ಸಾಲಗಳಿಗಾಗಿ ಈ ಹೊಸ ಮಗ್ಗಲುಗಳ ಅಧ್ಯಯನವು ಅಗತ್ಯವಾಗುತ್ತದೆ ಎಂದರು.







