ಮೊರೊಕ್ಕೊ ಜತೆಗಿನ ರಾಜತಾಂತ್ರಿಕ ಸಂಬಂಧ ಕಡಿದುಕೊಂಡ ಅಲ್ಜೀರಿಯಾ

photo: twitter.com/Lamamra_dz
ಅಲ್ಜೀರ್ಸ್, ಆ.25: ಹಗೆತನದ ವರ್ತನೆಯ ಹಿನ್ನೆಲೆಯಲ್ಲಿ ಮೊರೊಕ್ಕೊ ಜತೆಗಿನ ತನ್ನ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಳ್ಳುತ್ತಿರುವುದಾಗಿ ಅಲ್ಜೀರಿಯಾದ ವಿದೇಶ ವ್ಯವಹಾರ ಸಚಿವ ರಮ್ದಾನೆ ಲಮಮ್ರ ಹೇಳಿದ್ದಾರೆ.
ಮೊರೊಕ್ಕೊ ದೇಶವು ಅಲ್ಜೀರಿಯಾದ ವಿರುದ್ಧದ ಹಗೆತನದ ಕ್ರಮಗಳನ್ನು ನಿರಂತರ ಮುಂದುವರಿಸಿದೆ. ಈ ಕಾರಣದಿಂದ ಇಂದಿನಿಂದ ಆ ದೇಶದೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಳ್ಳಲು ನಿರ್ಧರಿಸಿದ್ದೇವೆ. ರಾಜತಾಂತ್ರಿಕ ಸಂಬಂಧ ಕಡಿತಗೊಂಡರೂ ಉಭಯ ದೇಶಗಳಲ್ಲಿರುವ ಕಾನ್ಸುಲೇಟ್ಸ್ ಕಚೇರಿಗಳು ತೆರೆದಿರುತ್ತವೆ ಎಂದವರು ಮಂಗಳವಾರ ಹೇಳಿದ್ದಾರೆ.
ಆಗಸ್ಟ್ 9ರಂದು ಅಲ್ಜೀರಿಯಾದ ಅರಣ್ಯದಲ್ಲಿ ಕಾಣಿಸಿಕೊಂಡ ಭೀಕರ ಕಾಡ್ಗಿಚ್ಚಿನಿಂದ ಸಾವಿರಾರು ಹೆಕ್ಟೇರ್ ಅರಣ್ಯಪ್ರದೇಶ ನಾಶವಾಗಿತ್ತು ಮತ್ತು 30ಕ್ಕೂ ಹೆಚ್ಚು ಭದ್ರತಾ ಸಿಬಂದಿ ಸಹಿತ ಕನಿಷ್ಟ 90 ಮಂದಿ ಮೃತರಾಗಿದ್ದರು. ಮೊರೊಕ್ಕೊ ಬೆಂಬಲಿತ ಸಂಘಟನೆ ‘ಮೂಮೆಂಟ್ ಫಾರ್ ಸೆಲ್ಫ್ ಡಿಟರ್ಮಿನೇಷನ್ ಆಫ್ ಕೆಬಿಲಿ (ಮ್ಯಾಕ್)ನ ಕೃತ್ಯ ಇದಾಗಿದೆ ಎಂದು ಅಲ್ಜೀರಿಯಾ ಆಕ್ರೋಶ ವ್ಯಕ್ತಪಡಿಸಿತ್ತು. ಮ್ಯಾಕ್ ಉಗ್ರ ಸಂಘಟನೆ ಎಂದು ಅಲ್ಜೀರಿಯಾ ಹೇಳುತ್ತಿದೆ. ಅಲ್ಜೀರಿಯಾದ ಕೆಬೀಲಿಯಾ ಪ್ರಾಂತ್ಯದಲ್ಲಿ ನಡೆಯುತ್ತಿರುವ ಸ್ವಾತಂತ್ರ್ಯ ಹೋರಾಟಕ್ಕೆ ಮ್ಯಾಕ್ ಬೆಂಬಲ ಸೂಚಿಸಿದೆ.
ಪಶ್ಚಿಮ ಸಹಾರಕ್ಕೆ ಸಂಬಂಧಿಸಿದ ವಿಷಯ ಸೇರಿದಂತೆ ನೆರೆಹೊರೆಯ ಈ 2 ದೇಶಗಳ ನಡುವಿನ ಸಂಬಂಧ ಹಲವು ದಶಕಗಳಿಂದ ಹದಗೆಟ್ಟಿದೆ. ಪಶ್ಚಿಮ ಸಹಾರಾ ಪ್ರದೇಶದಲ್ಲಿ ನಡೆಯುತ್ತಿರುವ ಸ್ವಾತಂತ್ರ್ಯ ಚಳವಳಿಯನ್ನು ಅಲ್ಜೀರಿಯಾ ಬೆಂಬಲಿಸುತ್ತಿದೆ. ಆದರೆ ಪಶ್ಚಿಮ ಸಹಾರಾ ಪ್ರದೇಶ ತನ್ನ ಭೂವ್ಯಾಪ್ತಿಯ ಒಳಗಿದೆ ಎಂದು ಮೊರೊಕ್ಕೊ ಪ್ರತಿಪಾದಿಸುತ್ತಿದೆ.
ಅಲ್ಜೀರಿಯಾದ ವಿರುದ್ಧ ಮೊರೊಕ್ಕೊ ನಡೆಸುತ್ತಿರುವ ನಿರಂತರ ಪ್ರತಿಕೂಲ ಉಪಕ್ರಮಗಳ ಹಿನ್ನೆಲೆಯಲ್ಲಿ ಆ ದೇಶದೊಂದಿಗಿನ ಸಂಬಂಧದ ಬಗ್ಗೆ ಪುನರ್ಪರಿಶೀಲನೆಯ ಅನಿವಾರ್ಯತೆಯಿದೆ ಮತ್ತು ಮೊರೊಕ್ಕೊದೊಂದಿಗಿನ ಪಶ್ಚಿಮದ ಗಡಿಭಾಗದಲ್ಲಿ ಭದ್ರತಾ ವ್ಯವಸ್ಥೆ ಬಿಗಿಗೊಳಿಸಲಾಗುವುದು ಎಂದು ಕಳೆದ ವಾರ ಅಲ್ಜೀರಿಯಾದ ಅಧ್ಯಕ್ಷರ ಕಚೇರಿ ಹೇಳಿಕೆ ನೀಡಿತ್ತು.







