ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ಇಷ್ಟು ಬೇಗ ವಶಪಡಿಸಿಕೊಳ್ಳುತ್ತಾರೆಂದು ನಿರೀಕ್ಷಿಸಿರಲಿಲ್ಲ: ಬಿಪಿನ್ ರಾವತ್

ಹೊಸದಿಲ್ಲಿ,ಆ.25: ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಪಡಿಸಿಕೊಳ್ಳಲಿದ್ದಾರೆ ಎಂದು ಭಾರತವು ನಿರೀಕ್ಷಿಸಿತ್ತು,ಆದರೆ ಅದು ಇಷ್ಟು ಬೇಗ ಸಂಭವಿಸಿರುವುದು ಅಚ್ಚರಿಯನ್ನು ಮೂಡಿಸಿದೆ ಎಂದು ಬುಧವಾರ ಇಲ್ಲಿ ಹೇಳಿದ ಸಶಸ್ತ್ರ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು,ಕಳೆದ 20 ವರ್ಷಗಳಲ್ಲಿ ತಾಲಿಬಾನ್ ಬದಲಾಗಿಲ್ಲ,ಅದರ ಪಾಲುದಾರರು ಮಾತ್ರ ಬದಲಾಗಿದ್ದಾರೆ ಎಂದರು.
ತಾಲಿಬಾನ್ ನಿಯಂತ್ರಿತ ಅಫ್ಘಾನಿಸ್ಥಾನದಿಂದ ಯಾವುದೇ ಸಂಭಾವ್ಯ ಭಯೋತ್ಪಾದಕ ಚಟುವಟಿಕೆಯು ಭಾರತವನ್ನು ಗುರಿಯಾಗಿಸಿಕೊಳ್ಳುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ ಅವರು ಕ್ವಾಡ್ ರಾಷ್ಟ್ರಗಳು (ಅಮೆರಿಕ ಆಸ್ಟ್ರೇಲಿಯಾ,ಭಾರತ ಮತ್ತು ಜಪಾನ) ಭೀತಿವಾದದ ವಿರುದ್ಧ ಜಾಗತಿಕ ಸಮರದಲ್ಲಿ ಸಹಕಾರವನ್ನು ಹೆಚ್ಚಿಸಬೇಕು ಎಂದು ತಿಳಿಸಿದರು. ಅವರು ಅಬ್ಸರ್ವರ್ ರೀಸರ್ಚ್ ಫೌಂಡೇಷನ್ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಸಂವಾದದಲ್ಲಿ ಪಾಲ್ಗೊಂಡಿದ್ದ ಅಮೆರಿಕದ ಇಂಡೋ-ಪೆಸಿಫಿಕ್ ಕಮಾಂಡ್ನ ಕಮಾಂಡರ್ ಅಡ್ಮಿರಲ್ ಜಾನ್ ಅಕ್ವಿಲಿನೊ ಅವರು ಭಾರತವು ಎದುರಿಸುತ್ತಿರುವ,ವಿಶೇಷವಾಗಿ ವಾಸ್ತವ ನಿಯಂತ್ರಣ ರೇಖೆಯಲ್ಲಿ ಸಾರ್ವಭೌಮತೆಗೆ ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿ ಬುನಾದಿಯ ಭದ್ರತಾ ಕಳವಳಗಳಿಗೆ ಸಂಬಂಧಿಸಿದ ಸವಾಲುಗಳನ್ನು ಚೀನಾವನ್ನು ಸ್ಪಷ್ಟವಾಗಿ ಬೆಟ್ಟು ಮಾಡಿ ಪ್ರಸ್ತಾಪಿಸಿದರು.
ಪ್ರದೇಶದಲ್ಲಿ ಭಯೋತ್ಪಾದಕ ಮುಕ್ತ ವಾತಾವರಣವನ್ನು ಖಚಿತಪಡಿಸಲು ಭಾರತವು ಬದ್ಧವಾಗಿದೆ ಎಂದ ರಾವತ್,ಕನಿಷ್ಠ ಭಯೋತ್ಪಾದಕರನ್ನು ಗುರುತಿಸುವಲ್ಲಿ ಮತ್ತು ಭೀತಿವಾದದ ವಿರುದ್ಧ ಜಾಗತಿಕ ಸಮರದಲ್ಲಿ ಹೋರಾಡಲು ಬೇಹು ಮಾಹಿತಿ ಸೇರಿದಂತೆ ಕ್ವಾಡ್ ರಾಷ್ಟ್ರಗಳಿಂದ ಇತರ ಯಾವುದೇ ಬೆಂಬಲಕ್ಕೆ ಸ್ವಾಗತವಿದೆ ಎಂದು ಹೇಳಿದರು.
ಅಫ್ಘಾನಿಸ್ತಾನದಿಂದ ಭಯೋತ್ಪಾದಕ ಚಟುವಟಿಕೆಗಳು ಭಾರತದ ಮೇಲೆ ಪರಿಣಾಮವನ್ನು ಬೀರುವ ಬಗ್ಗೆ ಸರಕಾರವು ಕಳವಳಗೊಂಡಿದೆ ಮತ್ತು ಇಂತಹ ಸವಾಲನ್ನು ಎದುರಿಸಲು ತುರ್ತು ಯೋಜನೆಗಳನ್ನು ರೂಪಿಸಲಾಗಿದೆ ಎಂದು ರಾವತ್ ತಿಳಿಸಿದರು. ತಾಲಿಬಾನ್ ನಿಯಂತ್ರಿತ ಅಫ್ಘಾನಿಸ್ತಾನದಿಂದ ಲಷ್ಕರೆ ತೊಯ್ಬಾ ಮತ್ತು ಜೈಷೆ ಮುಹಮ್ಮದ್ ಸೇರಿದಂತೆ ವಿವಿಧ ಭಯೋತ್ಪಾದಕ ಗುಂಪುಗಳ ಚಟುವಟಿಕೆಗಳು ಹೆಚ್ಚುವ ಸಾಧ್ಯತೆಯ ಬಗ್ಗೆ ಉಂಟಾಗಿರುವ ಕಳವಳಗಳ ಹಿನ್ನೆಲೆಯಲ್ಲಿ ರಾವತ್ ಅವರ ಈ ಹೇಳಿಕೆಯು ಹೊರಬಿದ್ದಿದೆ.







