ಇಸ್ರೇಲ್ ಸೇನೆ ದಾಳಿಯ ಗಾಯಾಳು ಫೆಲೆಸ್ತೀನ್ ಪ್ರಜೆ ಮೃತ್ಯು
ಗಾಝಾ, ಆ.25: ಗಾಝಾ ಪಟ್ಟಿಯಲ್ಲಿ ಇಸ್ರೇಲ್ ಸೇನೆಯ ವಿರುದ್ಧ ಶನಿವಾರ ನಡೆದ ಪ್ರತಿಭಟನೆಯನ್ನು ಚದುರಿಸಲು ಇಸ್ರೇಲ್ ಸೇನೆ ನಡೆಸಿದ್ದ ಕಾರ್ಯಾಚರಣೆಯ ಸಂದರ್ಭ ಗಾಯಗೊಂಡಿದ್ದ ಫೆಲೆಸ್ತೀನ್ ಪ್ರಜೆ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದಾಗಿ ಗಾಝಾ ಪಟ್ಟಿ ್ರದೇಶದ ಅಧಿಕಾರಿಗಳು ಹೇಳಿದ್ದಾರೆ.
ಶನಿವಾರ ಪ್ರತಿಭಟನೆಯ ಸಂದರ್ಭ ನಡೆದ ಘರ್ಷಣೆಯಲ್ಲಿ ಓರ್ವ ಇಸ್ರೇಲ್ ಪೊಲೀಸ್ ಅಧಿಕಾರಿಯೂ ತೀವ್ರವಾಗಿ ಗಾಯಗೊಂಡಿದ್ದಾನೆ. ಇಸ್ರೇಲ್ ಪಡೆಗಳ ಗುಂಡೇಟಿನಿಂದ ಗಾಯಗೊಂಡಿದ್ದ 32 ವರ್ಷದ ಫೆಲೆಸ್ತೀನ್ ಪ್ರಜೆ ಒಸಾಮ ಖಲೀದ್ ಚಿಕಿತ್ಸೆ ಫಲಿಸದೆ ಬುಧವಾರ ಮೃತಪಟ್ಟಿದ್ದಾರೆ ಎಂದು ಗಾಝಾ ಪಟ್ಟಿಯ ಆರೋಗ್ಯ ಇಲಾಖೆ ಹೇಳಿದೆ. ಈ ಮಧ್ಯೆ, ಶನಿವಾರದ ಪ್ರತಿಭಟನೆಯನ್ನು ಹತ್ತಿಕ್ಕುವ ಸಂದರ್ಭ ಇಸ್ರೇಲ್ ಸೇನೆ ನಡೆಸಿದ ಕಾರ್ಯಾಚರಣೆಯನ್ನು ಖಂಡಿಸಿ ಬುಧವಾರ ಮತ್ತೆ ಪ್ರತಿಭಟನೆ ನಡೆಸುವುದಾಗಿ ಗಾಝಾ ಪಟ್ಟಿಯಲ್ಲಿನ ಪೆಲೆಸ್ತೀನಿಯರ ಸಂಘಟನೆ ಹೇಳಿದೆ.
ಗಾಝಾ ಪಟ್ಟಿಯ ಗಡಿಬೇಲಿಯ ಆ ಕಡೆಯಿಂದ ಫೆಲೆಸ್ತೀನ್ನ ‘ಗಲಭೆಕೋರರು’ ಇಸ್ರೇಲ್ ಯೋಧರತ್ತ ಸ್ಫೋಟಕಗಳನ್ನು ಎಸೆಯತೊಡಗಿದ್ದರು. ಈ ಸಂದರ್ಭ ಯೋಧರು ಆತ್ಮರಕ್ಷಣೆಗೆ ಗುಂಡು ಹಾರಿಸಿದ್ದಾರೆ ಎಂದು ಇಸ್ರೇಲ್ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ಗಡಿಯಾಚೆಗಿಂದ ಸ್ಫೋಟಕ ತುಂಬಿದ್ದ ಬಲೂನ್ಗಳ ದಾಳಿಗೆ ಉತ್ತರವಾಗಿ ಗಾಝಾ ಪಟ್ಟಿಯ ಮೇಲೆ ದಾಳಿ ನಡೆಸಲಾಗಿದೆ. ಇದೀಗ ಗಾಝಾ ವಿಭಾಗದಲ್ಲಿ ತನ್ನ ಪಡೆಗಳನ್ನು ಬಲಪಡಿಸಲಾಗುತ್ತಿದೆ ಎಂದು ಇಸ್ರೇಲ್ ಹೇಳಿದೆ.





