ಬಳ್ಳಾರಿ: ಬುಧವಾರ ಒಂದೇ ದಿನ 87 ಡೆಂಗಿ ಪ್ರಕರಣ ದೃಢ, 14 ಮಂದಿ ಆಸ್ಪತ್ರೆಗೆ ದಾಖಲು

ಫೈಲ್ ಚಿತ್ರ
ಬಳ್ಳಾರಿ, ಆ.25: ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ 87 ಡೆಂಗಿ ಪ್ರಕರಣಗಳು ದೃಢಪಟ್ಟಿದ್ದು, ಬುಧವಾರ ಒಂದೇ ದಿನ ಡೆಂಗಿಯಿಂದ ಬಳಲುತ್ತಿರುವ 14 ಮಂದಿ(ಬಹುತೇಕ ಮಕ್ಕಳು) ವಿಮ್ಸ್ಗೆ ದಾಖಲಾಗಿದ್ದಾರೆ.
ವಿಮ್ಸ್ಗೆ ದಾಖಲಾದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರೂ ಗುಣಮುಖರಾಗುತ್ತಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ವಿಮ್ಸ್ ಅಧೀಕ್ಷಕ ಡಾ. ಅಶ್ವಿನಿ ಕುಮಾರ್ ಹೇಳಿದರು.
ಬಳ್ಳಾರಿಯಲ್ಲಿ ಅತೀ ಹೆಚ್ಚು ಅಂದರೆ 52 ಡೆಂಗಿ ಪ್ರಕರಣಗಳು ಪತ್ತೆಯಾಗಿವೆ. ಆದರೆ, ಹೂವಿನಹಡಗಲಿಯಲ್ಲಿ ಒಂದೂ ಪ್ರಕರಣ ಇಲ್ಲ. ವಿಮ್ಸ್ಗೆ ದಾಖಲಾದವರಲ್ಲಿ ಮಕ್ಕಳ ಸಂಖ್ಯೆಯೇ ಹೆಚ್ಚು. ಡೆಂಗಿ ವಾರ್ಡ್ನಲ್ಲಿ ಹಾಸಿಗೆ ಸಮಸ್ಯೆ ಇರುವುದರಿಂದ, ಪ್ರತಿ ಮಂಚದಲ್ಲೂ ಎರಡೆರಡು ಮಕ್ಕಳನ್ನು ಮಲಗಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಜನವರಿಯಿಂದ ಇಲ್ಲಿಯವರೆಗೆ 1,112 ಸಂಶಯಾಸ್ಪದ ಡೆಂಗಿ ಪ್ರಕರಣಗಳಿದ್ದವು. ಜನರ ರಕ್ತ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದಾಗ 87 ಪ್ರಕರಣಗಳಲ್ಲಿ ಡೆಂಗಿ ಇರುವುದು ಖಚಿತವಾಯಿತು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಜನಾರ್ದನ್ ತಿಳಿಸಿದರು.
ವಿಮ್ಸ್ನಲ್ಲಿ ನಡೆಸಿದ `ಮೆಸೆಲಿಸಾ ಪರೀಕ್ಷೆ' 87 ಪಕ್ರರಣಗಳಲ್ಲಿ ಡೆಂಗಿ ಇರುವುದನ್ನು ಖಚಿತಪಡಿಸಿದೆ. ಮಲೇರಿಯಾದ ಎರಡು ಪ್ರಕರಣಗಳಿವೆ. ವೈರಾಣು ಜ್ವರದಿಂದ ಬಳಲುತ್ತಿರುವವರ ನಿಖರ ಸಂಖ್ಯೆ ಸಿಕ್ಕಿಲ್ಲ ಎಂದು ಜಿಲ್ಲಾ ಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ. ಅಬ್ದುಲ್ಲಾ ಸ್ಪಷ್ಟಪಡಿಸಿದರು.
ಆಶಾ-ಅಂಗನವಾಡಿ ಕಾರ್ಯಕರ್ತೆಯರು ಮನೆ, ಮನೆ ಸಮೀಕ್ಷೆ ನಡೆಸಿದ್ದಾರೆ. ಡೆಂಗಿ ಹರಡುವ ಸೊಳ್ಳೆಗಳನ್ನು ನಾಶಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಕೆರೆಕಟ್ಟೆಗಳಲ್ಲಿ ಸೊಳ್ಳೆಗಳು ಉತ್ಪತ್ತಿ ಆಗುವುದನ್ನು ತಡೆಯಲು 'ಜಂಬೂಷಿಯಾ' ಮತ್ತು 'ಗಪ್ಪಿ' ಮೀನುಗಳನ್ನು ಬಿಡಲಾಗುತ್ತಿದೆ. ನೀರಿನಲ್ಲಿ ಉತ್ಪತ್ತಿಯಾಗುವ ಸೊಳ್ಳೆಗಳನ್ನು ಇವು ತಿಂದು ಹಾಕುತ್ತವೆಂದು ಅಬ್ದುಲ್ಲಾ ವಿವರಿಸಿದರು.







