ಉದ್ಧವ್ ಠಾಕ್ರೆ ಭಾರತದ ಬಗ್ಗೆ ನಿರ್ಲಕ್ಷ ಪ್ರದರ್ಶಿಸಿದ್ದಕ್ಕೆ ಟೀಕಿಸಿದ್ದೆ: ನಾರಾಯಣ ರಾಣೆ

ಮುಂಬೈ, ಅ. 25: ನನಗೆ ದೇಶದ ಬಗ್ಗೆ ಹೆಮ್ಮ ಇರುವುದರಿಂದ ಉದ್ದವ್ ಠಾಕ್ರೆ ವಿರುದ್ಧ ಹೇಳಿಕೆ ನೀಡಿದ್ದೆ ಎಂದು ಕೇಂದ್ರ ಸಚಿವ ನಾರಾಯಣ ರಾಣೆ ಬುಧವಾರ ಸ್ಪಷ್ಟನೆ ನೀಡಿದ್ದಾರೆ.
ಉದ್ಧವ್ ಠಾಕ್ರೆ ಅವರ ಕಪಾಳಕ್ಕೆ ಬಾರಿಸುತ್ತಿದ್ದೆ ಎಂದು ಹೇಳುವ ಮೂಲಕ ಬಂಧನಕ್ಕೊಳಗಾದ ಹಾಗೂ ಅನಂತರ ಜಾಮೀನಿನಲ್ಲಿ ಬಿಡುಗಡೆಯಾದ ಬಳಿಕ ನಾರಾಯಣ ರಾಣೆ ಮೊದಲ ಬಾರಿ ಈ ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿಯ ಮುಂಬೈಯಿಂದ ಸಿಂಧುದುರ್ಗದ ವರೆಗೆ ‘ಜನ ಆಶೀರ್ವಾದ ಯಾತ್ರೆ’ಗಾಗಿ ರಾಜ್ಯ ಪ್ರವಾಸ ಕೈಗೊಂಡಿರುವ ನಾರಾಯಣ ರಾಣೆ ಸೋಮವಾರ ರಾತ್ರಿ ರತ್ನಗಿರಿ ಜಿಲ್ಲೆಯ ಚಿಪ್ಲೂನ್‌ನಲ್ಲಿ ನಡೆದ ರ್ಯಾಲಿ ಸಂದರ್ಭ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆಗಸ್ಟ್ 15ರಂದು ರಾಜ್ಯದ ಜನರನ್ನು ಉದ್ದೇಶಿಸಿ ಮಾತನಾಡುವಾಗ ಉದ್ಧವ್ ಠಾಕ್ರೆ ಸ್ವಾತಂತ್ರ ಸಿಕ್ಕಿದ ದಿನವನ್ನು ಮರೆತರು. ಒಂದು ವೇಳೆ ನಾನು ಅಲ್ಲಿದ್ದಿದ್ದರೆ ಅವರ ಕಪಾಳಕ್ಕೆ ಬಾರಿಸುತ್ತಿದ್ದೆ ಎಂದು ಹೇಳಿದ್ದರು.
ಅವರು ಕೋಪಗೊಳ್ಳುವಂತದ್ದು ನಾನೇನು ಹೇಳಿದ್ದೇನೆ? ದೇಶದ ಬಗ್ಗೆ ಹೆಮ್ಮೆ ಇಲ್ಲದವರು, ಸ್ವಾತಂತ್ರ ದಿನವನ್ನು ನೆನಪಿಸಿಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ನಾನು ಹೇಳಿದ್ದೆ. ನನ್ನ ಹೇಳಿಕೆ ದಾಖಲಾಗಿದೆ ಎಂದು ಅವರು ತಿಳಿಸಿದರು.
ಈ ಹಿಂದೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಅವರು ಕೇಂದ್ರದ ಗೃಹ ಸಚಿವ ಅಮಿತ್ ಶಾ ಹಾಗೂ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂದು ಹೇಳಿದ ರಾಣೆ, ನಮ್ಮ ರಾಷ್ಟ್ರದ ಬಗ್ಗೆ ನಿರ್ಲಕ್ಷ ತೋರಿಸಿರುವ ಕಾರಣಕ್ಕೆ ಮಾತನಾಡಿದೆವು. ನೀವು ನನಗೆ ಏನೂ ಮಾಡಲಾರಿರಿ. ನಾನು ನಿಮಗೆ ಹೆದರಲಾರೆ ಎಂದಿದ್ದಾರೆ.







